ಉತ್ತರ ಕನ್ನಡದಲ್ಲಿ ಬಿಸಿಲಿನ ಅಲೆ: ಫೆ.14–15ರಂದು 37.5 ಡಿಗ್ರಿ ತಾಪಮಾನ ಸಾಧ್ಯತೆ
ದಾಂಡೇಲಿ (ಉತ್ತರ ಕನ್ನಡ): ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿಯಂತೆ, ಫೆಬ್ರವರಿ 14 ಮತ್ತು 15ರಂದು ಜಿಲ್ಲೆಯಾದ್ಯಂತ ಗರಿಷ್ಠ ಉಷ್ಣಾಂಶವು ಸುಮಾರು 37.5 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕರು ಸಾಮಾನ್ಯಕ್ಕಿಂತ 3–4 ಡಿಗ್ರಿ ಹೆಚ್ಚುವರಿ ಬಿಸಿಲು ಅನುಭವಿಸುವ ಸಾಧ್ಯತೆ ಇದೆ.
ಹೆಚ್ಚುತ್ತಿರುವ ತಾಪಮಾನವು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಉತ್ತರ ಕನ್ನಡ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರು ಸಾರ್ವಜನಿಕರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ.
ಮಾಡಬಾರಾದ ಕ್ರಮಗಳು (ತಪ್ಪಿಸಬೇಕಾದವು): ತೀವ್ರ ಬಿಸಿಲಿನಲ್ಲಿ ಅನಾವಶ್ಯಕವಾಗಿ ಹೊರಗೆ ಹೋಗದಿರಿ. ಮದ್ಯಪಾನ, ಕಾಫಿ, ಸಿಹಿತಿಂಡಿಗಳ ಸೇವನೆ ತಪ್ಪಿಸಿ. ಬಿಸಿಲಿನಲ್ಲಿ ಕಠಿಣ ಶಾರೀರಿಕ ಕೆಲಸ ಮಾಡಬೇಡಿ. ಮಕ್ಕಳನ್ನು ಹಾಗೂ ಪ್ರಾಣಿಗಳನ್ನು ಮುಚ್ಚಿದ ವಾಹನಗಳಲ್ಲಿ ಬಿಡಬೇಡಿ.
ಅತಿಯಾದ ಮಸಾಲೆ ಮತ್ತು ಎಣ್ಣೆಯುಕ್ತ ಆಹಾರ ಸೇವಿಸಬೇಡಿ. ಉಷ್ಣಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ತಲೆ ಮುಚ್ಚಿಕೊಳ್ಳದೇ ನೇರ ಬಿಸಿಲಿಗೆ ಒಡ್ಡಿಕೊಳ್ಳಬೇಡಿ.
ಮಾಡಬೇಕಾದ ಕ್ರಮಗಳು (ಅನುಸರಿಸಬೇಕಾದವು): ದಿನಪೂರ್ತಿ ನಿಯಮಿತವಾಗಿ ನೀರು ಕುಡಿಯಿರಿ. ಓಆರ್‌ಎಸ್, ನಿಂಬೆ ನೀರು, ಮಜ್ಜಿಗೆ, ತೆಂಗಿನ ನೀರು ಸೇವನೆ ಹೆಚ್ಚಿಸಿ. ಹಗುರವಾದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಮಧ್ಯಾಹ್ನದ ತೀವ್ರ ಬಿಸಿಲಿನ ಸಮಯದಲ್ಲಿ ಹೊರ ಹೋಗುವುದನ್ನು ತಪ್ಪಿಸಿ. ಹೊರಗೆ ಕೆಲಸ ಮಾಡುವಾಗ ನೆರಳಿನಲ್ಲಿ ವಿಶ್ರಾಂತಿ ಪಡೆಯಿರಿ. ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರಿಗೆ ವಿಶೇಷ ಕಾಳಜಿ ವಹಿಸಿ. ತಲೆಸುತ್ತು, ವಾಂತಿ, ಜ್ವರ, ಅಸ್ವಸ್ಥತೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಮನೆ ಮತ್ತು ಕೆಲಸದ ಸ್ಥಳಗಳಲ್ಲಿ ಉತ್ತಮ ಗಾಳಿ ಹರಿವಿಗೆ ವ್ಯವಸ್ಥೆ ಮಾಡಿಕೊಳ್ಳಿ.
ಆರೋಗ್ಯದ ಬಗ್ಗೆ ಎಚ್ಚರಿಕೆ: ತೀವ್ರ ಬಿಸಿಲು ದೇಹದಲ್ಲಿ ನೀರಿನ ಕೊರತೆ, ತಲೆಸುತ್ತು, ದೌರ್ಬಲ್ಯ, ಉಷ್ಣಾಘಾತಕ್ಕೆ ಕಾರಣವಾಗಬಹುದು. ಹೀಗಾಗಿ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಿ, ಆರೋಗ್ಯ ಕಾಪಾಡಿಕೊಳ್ಳಬೇಕೆಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಮನವಿ ಮಾಡಿದೆ.























