Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಲಕ್ಷಾಂತರ ಭಕ್ತರ ಮಧ್ಯೆ ಉಳವಿ ಶ್ರೀ ಚೆನ್ನಬಸವೇಶ್ವರ ರಥೋತ್ಸವ

ಲಕ್ಷಾಂತರ ಭಕ್ತರ ಮಧ್ಯೆ ಉಳವಿ ಶ್ರೀ ಚೆನ್ನಬಸವೇಶ್ವರ ರಥೋತ್ಸವ

0
120

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಜೋಯಡಾ ತಾಲೂಕಿನ ಉಳವಿ ಚೆನ್ನಬಸವೇಶ್ವರ ರಥೋತ್ಸವಕ್ಕೆ ಭಕ್ತಸಾಗರವೇ ಹರಿದು ಬಂತು. ಉತ್ತರ ಕರ್ನಾಟಕದಲ್ಲಿ ಅತಿ ದೊಡ್ಡ ಮಟ್ಟದಲ್ಲಿ ನಡೆಯುವ ಜಾತ್ರೆಗೆ ಚಕ್ಕಡಿ, ಟ್ರ್ಯಾಕ್ಟರ್ ಇನ್ನಿತರ ವಾಹನಗಳಲ್ಲಿ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸಿದ್ದರು.

ಮಂಗಳವಾರ ಭಾರತ ಹುಣ್ಣಿಮೆಯ ಮಘಾ ನಕ್ಷತ್ರದ ಪಾಡ್ಯದ ಶುಭ ಘಳಿಗೆಯಲ್ಲಿ ಮಧ್ಯಾಹ್ನ ನಾಲ್ಕು ಗಂಟೆಗೆ ನಡೆದ ರಥೋತ್ಸವಕ್ಕೆ ಲಕ್ಷಾಂತರ ಜನರು ಸಾಕ್ಷಿಯಾದರು. ಈ ವೇಳೆ ಭಕ್ತರ ಜಯಘೋಷಗಳು ಮೊಳಗಿದವು.

ರಥಬೀದಿಯಲ್ಲಿ ತೇರನ್ನು ಭಕ್ತರು ಜಯಘೋಷದೊಂದಿಗೆ ಎಳೆದೊಯ್ಯುವುದನ್ನು ಭಕ್ತರು ಕಣ್ತುಂಬಿಕೊಂಡು ಪ್ರಸನ್ನರಾಗಿ ಪೂಜೆ, ಪುನಸ್ಕಾರ, ಹರಕೆಗಳನ್ನು ಅರ್ಪಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜಾತ್ರೆಗೆ ವಿಶೇಷವಾಗಿ ವಿಜಯಪುರ, ಬಾಗಲಕೋಟೆ, ನವಲಗುಂದ, ಜಮಖಂಡಿ, ಹಾವೇರಿ, ಬೆಳಗಾವಿ, ಕೊಪ್ಪಳ, ಗೋವಾ, ಮಹಾರಾಷ್ಟ್ರಗಳಿಂದಲೂ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.

ಜನವರಿ 25ರಂದು ಪ್ರಾರಂಭಗೊಂಡ ಜಾತ್ರೆ ಭಾರತ ಹುಣ್ಣಿಮೆಯ ದಿನವಾದ ಇಂದು ರಥೋತ್ಸವ ನಡೆದರೂ ಇನ್ನೂ ಎರಡು ದಿನಗಳ ಕಾಲ ಜಾತ್ರೆ ನಡೆಯಲಿದೆ. ಧಾರ್ಮಿಕ ಕಾರ್ಯ, ವಿಧಿ ವಿಧಾನಗಳು ನಡೆಯಲಿದ್ದು, ನಂತರ ಜಾತ್ರೆ ಸಂಪನ್ನಗೊಳ್ಳಲಿದೆ.

ಈ ಬಾರಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಜಾತ್ರಾ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿದ್ದು ಗಮನ ಸೆಳೆಯಿತು. ಟ್ರಾಫಿಕ್ ಸಮಸ್ಯೆ ಕಿರಿ ಕಿರಿಯನ್ನುಂಟು ಮಾಡಿದರೂ ಡಿವೈಎಸ್ಪಿ ಶಿವಾನಂದ ಮದರ ಖಂಡಿ ಸ್ಥಳದಲ್ಲೇ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿ, ಪೊಲೀಸರು ಸಂಯಮದಿಂದ ವರ್ತಿಸಿ, ನಿಯಂತ್ರಿಸಿ ಶಾಂತಿ ಸುವ್ಯವಸ್ತೆ ಕಾಪಾಡಿದರು.

ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಉಳವಿ ಚೆನ್ನ ಬಸವೇಶ್ವರ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಸಂಜಯ ಕಿತ್ತೂರು ಮತ್ತು ಪದಾಧಿಕಾರಿಗಳು ಭಕ್ತಾದಿಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿದ್ದರು.

Previous articleಹೆಂಡತಿಯ ಅಕ್ರಮ ಸಂಬಂಧ! ಅಣ್ಣನ ಬಲಿತೆಗೆದ ‘ಕಾಮ’ಕಾಂಡ; ಖ್ಯಾತ ಜ್ಯೋತಿಷಿ ಈಗ ಅಂದರ್!
Next articleಮಾರಿಕಾಂಬಾ ದರ್ಶನಕ್ಕೆ ಬಂದಿದ್ದ ಕಾಗೋಡು ತಿಮ್ಮಪ್ಪ ಅಸ್ವಸ್ಥ