Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಉಳವಿ ಜಾತ್ರೆ: ಪೋಲಿಸ್ ಇಲಾಖೆಯ ವಿಶೇಷ ಬಂದೋಬಸ್ತ

ಉಳವಿ ಜಾತ್ರೆ: ಪೋಲಿಸ್ ಇಲಾಖೆಯ ವಿಶೇಷ ಬಂದೋಬಸ್ತ

0
3

ದಾಂಡೇಲಿ (ಉತ್ತರ ಕನ್ನಡ): ಉಳವಿ ಕ್ಷೇತ್ರದ ಪ್ರಸಿದ್ಧ ಶ್ರೀ ಚೆನ್ನಬಸವೇಶ್ವರ ಜಾತ್ರೆ ಜನವರಿ 25ರಿಂದ ಆರಂಭಗೊಂಡಿದ್ದು, ಫೆಬ್ರುವರಿ 5ರವರೆಗೆ ಭಕ್ತಿಭಾವದಿಂದ ನಡೆಯಲಿದೆ. ಜಾತ್ರೆಯ ಪ್ರಮುಖ ಆಕರ್ಷಣೆಯಾದ ಮಹಾರಥೋತ್ಸವವು ಫೆಬ್ರುವರಿ 3ರವರೆಗೆ ಜರುಗಲಿದ್ದು, ಈ ಅವಧಿಯಲ್ಲಿ ಸುಮಾರು 80ರಿಂದ 90 ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಭಕ್ತರ ಭದ್ರತೆ ಹಾಗೂ ಸುಗಮ ಯಾತ್ರೆಗಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದು, ಜಾತ್ರೆಯ ಪೂರ್ಣ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಕಲ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೀದರ್‌: ನಿಗೂಢ ವಸ್ತು ಸ್ಪೋಟ – ಮಕ್ಕಳು ಸೇರಿ 6 ಜನರಿಗೆ ಗಾಯ

ಉಳವಿ ಜಾತ್ರೆಯ ವಿಶೇಷತೆ ಎಂದರೆ ಭಕ್ತರು ಚಕ್ಕಡಿ ಗಾಡಿಗಳಲ್ಲಿ ಹಾಗೂ ಪಾದಯಾತ್ರೆಯ ಮೂಲಕ ಆಗಮಿಸುವ ಸಂಪ್ರದಾಯ. ಈ ಬಾರಿ ಸುಮಾರು 1200 ಚಕ್ಕಡಿಗಳು ಮತ್ತು 800 ಟ್ರ್ಯಾಕ್ಟರ್‌ಗಳಲ್ಲಿ ಭಕ್ತರು ಬಂದು ವಾಸ್ತವ್ಯ ಮಾಡುವ ನಿರೀಕ್ಷೆಯಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ.

ಭದ್ರತೆಗಾಗಿ ವಿಸ್ತೃತ ಪೊಲೀಸ್ ಬಂದೋಬಸ್ತ್ : ಜಾತ್ರೆಯ ಭದ್ರತೆಗೆ 1 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 1 ಡಿಎಸ್‌ಪಿ, 6 ಸಿಪಿಐಗಳು, 26 ಪಿಎಸ್‌ಐಗಳು, 300 ಪೊಲೀಸ್ ಸಿಬ್ಬಂದಿ, 200 ಹೋಂ ಗಾರ್ಡ್ಸ್, 2 ಡಿಎಆರ್ ತಂಡಗಳು, 1 ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ.

ಇದನ್ನೂ ಓದಿ: ತುಮಕೂರು ಪಿಎಸ್‌ಐ ಲೋಕಾಯುಕ್ತರ ಬಲೆಗೆ

ತಾಂತ್ರಿಕ ನಿಗಾ ಮತ್ತು ಮೂಲಸೌಕರ್ಯ: ಸರ್ಕಾರದ ಮಾರ್ಗಸೂಚಿಯಂತೆ ಜಾತ್ರಾ ಪ್ರದೇಶದಲ್ಲಿ 100 ಸಿಸಿಟಿವಿ ಕ್ಯಾಮೆರಾಗಳ ಸ್ಥಾಪನೆ ಮಾಡಿದ್ದು ಕಮಾಂಡ್ ಸೆಂಟರ್ ಕಾರ್ಯಾರಂಭ ಮಾಡಲಾಗಿದೆ. 10 ಎಲ್‌ಇಡಿ ಸ್ಕ್ರೀನ್‌ಗಳು, 5 ಮಿನಿ ವಾಚ್ ಟವರ್‌ಗಳು, 8 ಪಾರ್ಕಿಂಗ್ ತಾಣಗಳ ನಿರ್ಮಾಣ ಮಾಡಲಾಗಿದೆ.

ಇದಲ್ಲದೆ, ಡ್ರೋನ್ ಮೂಲಕ ನಿಗಾ, ತಾತ್ಕಾಲಿಕ ಪೊಲೀಸ್ ಹೊರಠಾಣೆ, 4 ಅಂಬ್ಯುಲೆನ್ಸ್ ಸೇವೆಗಳು, 4 ಕಡೆ ವೈದ್ಯಕೀಯ ಚಿಕಿತ್ಸಾ ಕೇಂದ್ರಗಳು, 1 ಅಗ್ನಿಶಾಮಕ ವಾಹನ, ಹಾಗೂ ಪೈರ್ ಬೈಕ್‌ಗಳ ನಿಯೋಜನೆ ಮಾಡಲಾಗಿದೆ. ಸುಮಾರು 150 ಸ್ವಯಂಸೇವಕರು ಸಮವಸ್ತ್ರದಲ್ಲಿ ಸೇವೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ತಂದೆ–ಮಗನ ಸಂಬಂಧದ ಭಾವುಕ ಕಥನದ ‘ಚೌಕಿದಾರ್’ ವಿಮರ್ಶೆ

ಸಂಚಾರ ಮತ್ತು ಕಾನೂನು ಕ್ರಮ: ಚಕ್ಕಡಿಗಳ ಸುರಕ್ಷಿತ ಸಂಚಾರಕ್ಕಾಗಿ ದಾಂಡೇಲಿ ಉಪವಿಭಾಗದ ವ್ಯಾಪ್ತಿಯ 70 ಕಿ.ಮೀ ರಸ್ತೆಯಲ್ಲಿ 24 ಗಂಟೆಗಳ ಬೈಕ್ ಪೆಟ್ರೋಲಿಂಗ್ ವ್ಯವಸ್ಥೆ ಮಾಡಲಾಗಿದೆ. ಚಕ್ಕಡಿಗಳನ್ನು ಗುರುತಿಸಲು ಚೆಕ್‌ಪೋಸ್ಟ್‌ಗಳಲ್ಲಿ ರೆಡಿಯಂ ಸ್ಟಿಕ್ಕರ್ ಅಂಟಿಸುವ ವಿಶೇಷ ಉಪಕ್ರಮ ಜಾರಿಯಲ್ಲಿದೆ. ಒಟ್ಟು 5 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ನಿಗಾ ವಹಿಸಲಾಗಿದೆ.

ಮದ್ಯ ಮಾರಾಟ ನಿಷೇಧ: ದಾಂಡೇಲಿ ಉಪವಿಭಾಗದ ಮೂರು ತಾಲೂಕುಗಳಲ್ಲಿ ಫೆಬ್ರುವರಿ 2 ಮತ್ತು 3ರಂದು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಕಳ್ಳತನ ತಡೆಗೆ ವಿಶೇಷ ಪಡೆ: ಕಿಸೆಗಳ್ಳರು ಹಾಗೂ ಸರಗಳ್ಳರ ತಡೆಗಾಗಿ ಧಾರವಾಡ, ಬೆಳಗಾವಿ, ಹಾವೇರಿ ಮತ್ತು ಹುಬ್ಬಳ್ಳಿ ಜಿಲ್ಲೆಗಳಿಂದ ನುರಿತ ಪೊಲೀಸ್ ಸಿಬ್ಬಂದಿಗಳನ್ನು ಕರೆಸಿ ವಿಶೇಷ ಪಡೆ ರಚಿಸಲಾಗಿದೆ.

ಇದನ್ನೂ ಓದಿ: ಹಳ್ಳಿಯ ಗಾಳಿಯಂತೆ ಮನಸ್ಸಿಗೆ ಇಳಿಯುವ ‘ವಲವಾರ’ ವಿಮರ್ಶೆ

ಭಕ್ತರಿಗೆ ಪೊಲೀಸ್ ಇಲಾಖೆಯ ಮನವಿ: ಭಕ್ತರು ಜಾತ್ರೆಗೆ ಆಗಮಿಸುವಾಗ ಮದ್ಯಪಾನ ಮುಕ್ತ ಹಾಗೂ ಸುರಕ್ಷಿತ ಚಾಲನೆ ಪಾಲಿಸಬೇಕು. ಜಾನುವಾರುಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಚಕ್ಕಡಿಗಳನ್ನು ವೇಗವಾಗಿ ಓಡಿಸದೆ ಸುರಕ್ಷಿತ ಚಾಲನೆಗೆ ಆದ್ಯತೆ ನೀಡಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

ರಥೋತ್ಸವ ಮುಗಿದ ಬಳಿಕ ರಾತ್ರಿ 11 ಗಂಟೆಯ ನಂತರ ಮಾತ್ರ ಚಕ್ಕಡಿ ಹಾಗೂ ಟ್ರ್ಯಾಕ್ಟರ್‌ಗಳು ವಾಪಸ್ ತೆರಳಲು ಅನುಮತಿ ನೀಡಲಾಗುವುದು ಎಂದು ತಿಳಿಸಲಾಗಿದೆ.

ತುರ್ತು ಸಂಪರ್ಕ ಸಂಖ್ಯೆ: ಪೊಲೀಸ್ ತುರ್ತು ಸಹಾಯಕ್ಕಾಗಿ: 112 / ERSS / 100 ಕಂಟ್ರೋಲ್ ರೂಮ್ ಕಾರವಾರ: ಪಿಎಸ್‌ಐ ಜೋಯಿಡಾ: 9480805266, ಸಿಪಿಐ ಜೋಯಿಡಾ: 9480805237, ಡಿಎಸ್‌ಪಿ ದಾಂಡೇಲಿ: 9480805223, ಇವುಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ತಿಳಿಸಿದ್ದಾರೆ.

Previous articleಚಿತ್ರರಂಗದ 3 ದಶಕಗಳ ಸಂಭ್ರಮದಲ್ಲಿ ಸುದೀಪ್ ಭಾವುಕ ಪತ್ರ
Next articleಅಕ್ರಮ ಗಣಿಗಾರಿಕೆ ತಡೆಗೆ ಮಹಿಳಾ ಅಧಿಕಾರಿಯ ಧೈರ್ಯ