ದಾಂಡೇಲಿ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಜೋಯಡಾ ತಾಲೂಕಿನ ಪಾವನ ಕ್ಷೇತ್ರ ಉಳವಿಯ ಶ್ರೀ ಚೆನ್ನಬಸವೇಶ್ವರ ಜಾತ್ರೆ ಕಳೆದ ರವಿವಾರ (ಜ.25) ಷಟ್ಸ್ಥಲ ಧ್ವಜಾರೋಹಣದೊಂದಿಗೆ ಅದ್ದೂರಿಯಾಗಿ ಪ್ರಾರಂಭಗೊಂಡಿದೆ. ಉತ್ತರ ಕರ್ನಾಟಕದ ಪ್ರಮುಖ ಹಾಗೂ ಐತಿಹಾಸಿಕ ಜಾತ್ರೆಗಳಲ್ಲೊಂದಾಗಿರುವ ಈ ಜಾತ್ರೆಯ ಪ್ರಮುಖ ಆಕರ್ಷಣೆಯಾದ ರಥೋತ್ಸವವು ಫೆಬ್ರವರಿ 3ರಂದು ಮಾಘ ಮಾಸದ ಶುಭ ಗಳಿಗೆಯಲ್ಲಿ ನಡೆಯಲಿದೆ.
ಉಳವಿ ಶ್ರೀ ಚೆನ್ನಬಸವೇಶ್ವರ ಸನ್ನಿಧಾನಕ್ಕೆ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಿಂದ ಸಾವಿರಾರು ಭಕ್ತರು ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದಾರೆ. ಭಕ್ತರು ಹಳ್ಳಿ ಹಳ್ಳಿಗಳಿಂದ ಚಕ್ಕಡಿ ಗಾಡಿಯಲ್ಲಿ ಧಾನ್ಯ, ಮೇವು, ಸಾಮಾನುಗಳನ್ನು ಹೊತ್ತು, ಕಾಲ್ನಡಿಗೆಯಲ್ಲಿ ದಟ್ಟ ಅರಣ್ಯ ಪ್ರದೇಶಗಳನ್ನು ದಾಟಿ ಉಳವಿಗೆ ತಲುಪುವುದು ಇಲ್ಲಿಯ ಅನನ್ಯ ಸಂಪ್ರದಾಯವಾಗಿದೆ.
ಇದನ್ನೂ ಓದಿ: ದರೋಡೆ: ATMಗೆ ಹಣ ಹಾಕಲು ಹೋದವರು ನಗದು ಸಮೇತ ಪರಾರಿ
ಈ ಪಯಣದಲ್ಲಿ ಹರ ಹರ ಮಹಾದೇವ ಘೋಷಣೆಯೊಂದಿಗೆ ರೈತರು ತಮ್ಮ ಎತ್ತುಗಳ ಸಹಿತ ನೂರಾರು ಕಿಲೋಮೀಟರ್ ದೂರದ ಪ್ರಯಾಣ ಕೈಗೊಳ್ಳುತ್ತಾರೆ. ಜಾತ್ರೆ ಆರಂಭವಾಗುವ ನಾಲ್ಕು–ಐದು ದಿನಗಳ ಮುನ್ನವೇ ದೂರದ ಊರುಗಳಿಂದ ಹೊರಟು, ಸುಮಾರು 10 ರಿಂದ 12 ದಿನಗಳ ಕಾಲ ಉಳವಿಯಲ್ಲಿ ಬೀಡು ಬಿಟ್ಟು, ರಥೋತ್ಸವದ ನಂತರ ಧನ್ಯತೆಯೊಂದಿಗೆ ತಮ್ಮ ಊರಿನತ್ತ ಮರಳುವುದು ಈ ಸಂಪ್ರದಾಯದ ಪ್ರಮುಖ ಭಾಗವಾಗಿದೆ.
ಆಧುನಿಕ ವಾಹನ ಸೌಲಭ್ಯಗಳು ಲಭ್ಯವಿದ್ದರೂ, ಇಂದಿಗೂ ಚಕ್ಕಡಿ ಗಾಡಿಯಲ್ಲಿ ಬರುವುದು ಇಲ್ಲಿನ ಭಕ್ತರಿಗೆ ಪ್ರತಿಷ್ಠೆ, ಭಕ್ತಿ ಮತ್ತು ಸಂಪ್ರದಾಯದ ಅವಿಭಾಜ್ಯ ಅಂಗವಾಗಿದೆ. ಈ ಚಕ್ಕಡಿ ಪಯಣವು ಉತ್ತರ ಕರ್ನಾಟಕದ ರೈತ ಸಂಸ್ಕೃತಿ, ಶ್ರಮಜೀವನ ಮತ್ತು ದೈವಭಕ್ತಿಯ ಅಪೂರ್ವ ಸಂಗಮವಾಗಿದೆ.
ಇದನ್ನೂ ಓದಿ: ಕೊನೆಗೂ ಸೆರೆಯಾದ ಚಿರತೆ: ಒಂದೂವರೆ ತಿಂಗಳ ಭಯಕ್ಕೆ ಮುಕ್ತಿ
ಭಕ್ತರ ಸೌಕರ್ಯಕ್ಕಾಗಿ ದಾರಿಯುದ್ದಕ್ಕೂ ದಾಸೋಹ ವ್ಯವಸ್ಥೆ ನಡೆಯುತ್ತಿದ್ದು, ದಾಂಡೇಲಿಯ ಮೃತ್ಯುಂಜಯ ಮಠವು ಪ್ರಮುಖ ತಂಗುದಾಣವಾಗಿ ಪರಿಣಮಿಸಿದೆ. ಇಲ್ಲಿ ಚಕ್ಕಡಿ ನಿಲ್ಲಿಸಲು, ಎತ್ತುಗಳ ವಿಶ್ರಾಂತಿಗೆ, ಅವುಗಳ ಮೈ ತೊಳೆಯಲು ಹಾಗೂ ಭಕ್ತರ ವಿಶ್ರಾಂತಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಚಕ್ಕಡಿ ಸೇವೆಯ ಮೂಲಕ ಬರುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗಿದೆ.
ಉಳವಿ ಜಾತ್ರೆ ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಗ್ರಾಮೀಣ ಸಂಸ್ಕೃತಿ, ರೈತ ಬದುಕು ಮತ್ತು ಸಾಮೂಹಿಕ ಭಕ್ತಿಯ ಉತ್ಸವವಾಗಿಯೇ ಮೆರಗನ್ನು ಪಡೆದುಕೊಂಡಿದೆ. ಈ ವರ್ಷ ಸುಮಾರು ಎರಡು ಸಾವಿರಕ್ಕೂ ಅಧಿಕ ಚಕ್ಕಡಿಗಳು ಜಾತ್ರೆಗೆ ಆಗಮಿಸಬಹುದು ಎಂಬ ಅಂದಾಜನ್ನು ಟ್ರಸ್ಟ್ ಕಮಿಟಿ ವ್ಯಕ್ತಪಡಿಸಿದೆ.























