Home ನಮ್ಮ ಜಿಲ್ಲೆ ಉತ್ತರ ಕನ್ನಡ ಉಳವಿ ಶ್ರೀ ಚೆನ್ನಬಸವೇಶ್ವರ ಜಾತ್ರೆಗೆ ಸಕಲ ಸಿದ್ಧತೆ

ಉಳವಿ ಶ್ರೀ ಚೆನ್ನಬಸವೇಶ್ವರ ಜಾತ್ರೆಗೆ ಸಕಲ ಸಿದ್ಧತೆ

0
10

ದಾಂಡೇಲಿ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಐತಿಹಾಸಿಕ, ಧಾರ್ಮಿಕ ಹಾಗೂ ಪಾರಂಪರಿಕ ಮಹತ್ವ ಹೊಂದಿರುವ ಜೋಯಡಾ ತಾಲೂಕಿನ ಉಳವಿಯ ಶ್ರೀ ಚೆನ್ನಬಸವಣ್ಣನವರ ಕ್ಷೇತ್ರದಲ್ಲಿ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಉಳವಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಮೊಕಾಶಿ ಹಾಗೂ ದೇವಾಲಯದ ಅರ್ಚಕರಾದ ಕಲ್ಮಠ ಶಾಸ್ತ್ರಿ ತಿಳಿಸಿದ್ದಾರೆ.

ಪ್ರತಿ ವರ್ಷ ಲಕ್ಷಾಂತರ ಭಕ್ತರು ದೇಶದ ವಿವಿಧ ಭಾಗಗಳಿಂದ ಆಗಮಿಸುವ ಈ ಜಾತ್ರಾ ಮಹೋತ್ಸವವನ್ನು ಸುಗಮ, ಸುರಕ್ಷಿತ ಹಾಗೂ ಶಿಸ್ತುಬದ್ಧವಾಗಿ ನಡೆಸುವ ಉದ್ದೇಶದಿಂದ ಉಳವಿ ಗ್ರಾಮ ಪಂಚಾಯತ್ ಹಾಗೂ ಶ್ರೀ ಚೆನ್ನಬಸವೇಶ್ವರ ಟ್ರಸ್ಟ್ ಪರಸ್ಪರ ಸಹಕಾರದೊಂದಿಗೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡಿವೆ. ಜಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯಗಳ ಒದಗಿಸುವಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಮಂಜುನಾಥ ಮೊಕಾಶಿ ಹೇಳಿದರು.

ಇದನ್ನೂ ಓದಿ:  ಸರ್ಕಾರಕ್ಕೆ ನಿಧಿ ನೀಡಿದ ಕುಟುಂಬಕ್ಕೆ ಪಂಚಾಯತನಿಂದ ನಿವೇಶನ

ಜಾತ್ರಾ ಮಹೋತ್ಸವದ ಭದ್ರತೆ, ಸುರಕ್ಷತೆ ಹಾಗೂ ಸಾರ್ವಜನಿಕ ವ್ಯವಸ್ಥೆಗಳ ಮೇಲ್ವಿಚಾರಣೆಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ನಿರ್ದೇಶನಗಳನ್ನು ನೀಡಿದ್ದು, ಮಾರ್ಗದರ್ಶನದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಭಕ್ತರ ಕುಡಿಯುವ ನೀರಿನ ಅಗತ್ಯತೆ ಪೂರೈಸುವ ಸಲುವಾಗಿ ಜಾತ್ರಾ ಸ್ಥಳದ ವಿವಿಧ ಭಾಗಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ನೀರಿನ ಕೊರತೆ ಉಂಟಾಗದಂತೆ 12 ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ಸಿದ್ಧಪಡಿಸಲಾಗಿದೆ. ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣದ ಹಿನ್ನಲೆಯಲ್ಲಿ 30 ಜನ ವಿಶೇಷ ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಇದನ್ನೂ ಓದಿ:  🎼 ಸ್ಯಾಂಡಲ್‌ವುಡ್‌ನ ಹಿಟ್ ಮೆಲೋಡಿ ಹಾಡುಗಳ ಪಟ್ಟಿಗೆ ಸೇರಲಿರುವ ಮುದ್ದು ಗುಮ್ಮ

ದೇವಾಲಯದ ಆವರಣದಲ್ಲಿ ಲಭ್ಯವಿರುವ ಶೌಚಾಲಯ ವ್ಯವಸ್ಥೆ ಸಾಕಾಗುವುದಿಲ್ಲ ಎಂಬ ಕಾರಣದಿಂದ ಜಿಲ್ಲಾಡಳಿತದ ಸಹಕಾರದೊಂದಿಗೆ ಬೆಳಗಾವಿ ನಗರ ಪಾಲಿಕೆಯಿಂದ 15 ಮೊಬೈಲ್ ಶೌಚಾಲಯಗಳನ್ನು ತರಿಸಲಾಗಿದೆ. ಇದರಿಂದ ಮಹಿಳೆಯರು, ವೃದ್ಧರು ಹಾಗೂ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ.

ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಇಲಾಖೆಯ ಸೂಚನೆಯಂತೆ ದೇವಾಲಯ ಟ್ರಸ್ಟ್ ವತಿಯಿಂದ 100 ಸಿಸಿಟಿವಿ ಕ್ಯಾಮರಾಗಳು ಹಾಗೂ 10 ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತಿದೆ. ಇದರ ಮೂಲಕ ಜನಸಂದಣಿ ನಿಯಂತ್ರಣ ಹಾಗೂ ಭದ್ರತಾ ಮೇಲ್ವಿಚಾರಣೆ ಸುಗಮವಾಗಲಿದೆ.

ಇದನ್ನೂ ಓದಿ:  ಹಂಸಲೇಖ-ಎಸ್.ಮಹೇಂದರ್ ಜೋಡಿಯ ಚಿತ್ರಕ್ಕೆ ಶೀರ್ಷಿಕೆ ಫಿಕ್ಸ್

ಪ್ರತಿ ವರ್ಷ ಎದುರಾಗುತ್ತಿದ್ದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಈ ಬಾರಿ ಭಕ್ತರ ಸಹಕಾರದೊಂದಿಗೆ 63 ಕೆ.ವಿ. ಟಿಸಿ ಅಳವಡಿಸಲಾಗಿದೆ. ಇದರಿಂದ ವಿದ್ಯುತ್ ವ್ಯತ್ಯಯವಿಲ್ಲದೆ ಜಾತ್ರಾ ಕಾರ್ಯಕ್ರಮಗಳು ನಿರ್ವಹಣೆಯಾಗಲಿವೆ.

ಲಕ್ಷಾಂತರ ಭಕ್ತರು ಭಾಗವಹಿಸುವ ಈ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದ್ದು, ಭಕ್ತರಿಗೆ ಸಂಪೂರ್ಣ ಸುರಕ್ಷತೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆಡಳಿತ, ಟ್ರಸ್ಟ್ ಹಾಗೂ ಪಂಚಾಯತ್ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.