ಕಾರವಾರ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಹಡಗುಗಳ ಸಂಚಾರದಲ್ಲಿ ಸಾಕಷ್ಟು ವ್ಯತ್ಯಯ ಉಂಟಾಗಿದ್ದರೂ, ಕಾರವಾರದ ವಾಣಿಜ್ಯ ಬಂದರಿಗೆ ಯುಎಇಯಿಂದ ಬಿಟುಮೆನ್ ಹೊತ್ತ ಹಡಗು ಯಶಸ್ವಿಯಾಗಿ ಆಗಮಿಸಿದೆ.
ಯುಎಇಯ ಖೋರ್ ಫಕ್ಕನ್ ಬಂದರಿನಿಂದ ಹೊರಟಿದ್ದ ಚೆಂಗ್ ಎಕ್ಸ್ ಹೆಸರಿನ ಈ ಹಡಗು ಸುಮಾರು 3,115 ಮೆಟ್ರಿಕ್ ಟನ್ ಬಿಟುಮಿನ್ ಹೊತ್ತು ತಂದಿದೆ ಎಂದು ಕಾರವಾರ ಬಂದರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಡಗು ಮಾರ್ಚ್ 3ರಂದು ಯುಎಇಯಿಂದ ಹೊರಟಿದ್ದು, ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಸುಮಾರು ಒಂಬತ್ತು ದಿನಗಳ ಪ್ರಯಾಣದ ನಂತರ ಮಾ. 18ರಂದು ಕಾರವಾರ ಬಂದರು ತಲುಪಿದೆ.
ಸಾಮಾನ್ಯವಾಗಿ ಕಾರವಾರ ವಾಣಿಜ್ಯ ಬಂದರಿಗೆ ಪ್ರತಿ ತಿಂಗಳು ಐದರಿಂದ ಎಂಟು ಬಿಟುಮಿನ್ ಹಡಗುಗಳು ಬರುತ್ತಿದ್ದವು, ಅಂದರೆ ವಾರಕ್ಕೆ ಕನಿಷ್ಠ ಎರಡು ಹಡಗುಗಳು ಆಗಮಿಸುತ್ತಿದ್ದವು. ಆದರೆ ಯುದ್ಧ ಆರಂಭವಾದ ನಂತರ ಹಡಗುಗಳ ಸಂಚಾರ ಕುಸಿದಿದ್ದು, ಮಾರ್ಚ್ ತಿಂಗಳ ಆರಂಭದಲ್ಲಿ ಒಂದು ಹಡಗು ಬಂದು ಹೋದ ನಂತರ ಇದೀಗ ದೀರ್ಘ ವಿರಾಮದ ಬಳಿಕ ಮತ್ತೊಂದು ಹಡಗು ಬಂದಿಳಿದಂತಾಗಿದೆ.
ಈ ರೀತಿ ಹಡಗುಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಕಾರವಾರ ಬಂದರಿಗೆ ಪ್ರತಿ ತಿಂಗಳು ಸುಮಾರು 60ರಿಂದ 80 ಲಕ್ಷ ರೂಪಾಯಿಗಳಷ್ಟು ಆದಾಯ ನಷ್ಟವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.























