ಉತ್ತರ ಕನ್ನಡ(ಹಳಿಯಾಳ): ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮತ್ತು ನಾವೆಲ್ಲರೂ ಒಂದೇ ಇದ್ದೇವೆ, ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ.. ರಾಜ್ಯದಲ್ಲಿ ಅನಾವಶ್ಯಕವಾಗಿ ಚರ್ಚೆಯನ್ನು, ಕಥೆಗಳನ್ನು ಹುಟ್ಟು ಹಾಕಲಾಗಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆಯವರು ನಮ್ಮ ರಾಷ್ಟ್ರೀಯ ಅಧ್ಯಕ್ಷರು, ನಾನು ಸಹ ದೆಹಲಿಗೆ ಹೋದಾಗ ಅವರನ್ನು ಭೇಟಿಯಾಗಿಯೇ ಬರುತ್ತೇನೆ. ಬೆಂಗಳೂರಿಗೆ ಅವರು ಆಗಮಿಸಿದಾಗ ಅವರನ್ನು ಭೇಟಿಯಾಗಿ ಮಾತನಾಡಿಸುತ್ತೇನೆ. ಹೀಗೆ ಭೇಟಿ ಮಾಡುವುದಕ್ಕೆ ಅಪಾರ್ಥ ಕಲ್ಪಿಸುವುದ ಸರಿಯಲ್ಲ ಎಂದರು.
ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ, ಆದರೆ ಕೆಲವರು ತಮ್ಮ ಜೀವನದಲ್ಲಿ ಒಂದೊಂದು ಗುರಿ, ಕನಸನ್ನು ಹೊಂದಿರುತ್ತಾರೆ. ಮಂತ್ರಿಯಾಗಬೇಕು, ಮುಖ್ಯಮಂತ್ರಿ ಯಾಗಬೇಕು, ಉಪಮುಖ್ಯಮಂತ್ರಿಯಾಗಬೇಕು ಎಂದು. ಹೀಗೆ ಗುರಿ ಮತ್ತು ಕನಸನ್ನು ಹೊಂದಿರುವುದು ತಪ್ಪಲ್ಲ ಎಂದರು.
ಶಿಸ್ತು ಇದೇ: ನಮ್ಮಲ್ಲಿ ಶಿಸ್ತು ಇದೆ. ನಮ್ಮ ಹೈಕಮಾಂಡ್ ಇದೆ, ಹೈಕಮಾಂಡ್ ನೀಡುವ ಹೇಳುವ ನಿರ್ಧಾರಗಳನ್ನು ನಾವು ಒಪ್ಪಿಕೊಂಡು ಪಾಲಿಸುತ್ತೇವೆ. ರಾಹುಲ್ ಗಾಂಧಿಯವರು ಹೆಚ್ಚಿನ ಆಸಕ್ತಿಯಿಂದ ದೇಶದಲ್ಲಿ ವಿರೋಧ ಪಕ್ಷಗಳನ್ನು ಸಬಲಿಕರಣಗೊಳಿಸುವ ಪ್ರಯತ್ನ ಆರಂಭಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.























