Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ 45 ವರ್ಷಗಳ ಕೊಡುಗೆ ಏನು? ದೇಶಪಾಂಡೆಗೆ ಸುನೀಲ್ ಹೆಗಡೆ ಸವಾಲು

45 ವರ್ಷಗಳ ಕೊಡುಗೆ ಏನು? ದೇಶಪಾಂಡೆಗೆ ಸುನೀಲ್ ಹೆಗಡೆ ಸವಾಲು

0
81

ದೇಶಪಾಂಡೆ ಒಂಬತ್ತು ಬಾರಿ ಶಾಸಕ, ಮಂತ್ರಿಯಾದರೂ ಜಿಲ್ಲೆಗೆ ಯಾವುದೇ ಸದೃಢ ಯೋಜನೆ ತಂದಿಲ್ಲ

ದಾಂಡೇಲಿ. (ಉತ್ತರ ಕನ್ನಡ): ದಾಂಡೇಲಿ (ಉತ್ತರ ಕನ್ನಡ): ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅನುಭವದ ಕೊರತೆಯಿದೆ ಎಂದು ಹೇಳಿದ್ದ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಅವರ ಹೇಳಿಕೆಯನ್ನು ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ತೀವ್ರವಾಗಿ ಖಂಡಿಸಿದ್ದಾರೆ.

ಕಾರವಾರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಪಾಂಡೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಅಭಿವೃದ್ಧಿಗೆ ಶೂನ್ಯ ಕೊಡುಗೆ: ದೇಶಪಾಂಡೆ ಅವರು ಒಂಬತ್ತು ಬಾರಿ ಶಾಸಕರಾಗಿ, ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರೂ ಜಿಲ್ಲೆಗೆ ಒಂದೇ ಒಂದು ಸದೃಢ ಅಭಿವೃದ್ಧಿ ಯೋಜನೆ ತರಲಿಲ್ಲ ಎಂದು ಸುನೀಲ್ ಹೆಗಡೆ ಆರೋಪಿಸಿದರು. ತಮ್ಮ ಕ್ಷೇತ್ರದಲ್ಲಿರುವ ರಾಮನಗರ–ಅನಮೋಡ ರಸ್ತೆಯ ದುಃಸ್ಥಿತಿಯೇ ಅವರ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಪ್ರತಿ ವರ್ಷ ರಸ್ತೆ ದುರಸ್ತಿಯ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದರು.

ಬೆಳೆ ವಿಮೆ ಮತ್ತು ರೈಲ್ವೆ ಯೋಜನೆಗಳ ನಿರ್ಲಕ್ಷ್ಯ: ಹಳಿಯಾಳ–ಜೊಯಿಡಾ ವ್ಯಾಪ್ತಿಯಲ್ಲಿ ಮಳೆಮಾಪನ ಕೇಂದ್ರಗಳು ಹಾಳಾಗಿದ್ದು, ಅವುಗಳ ನಿರ್ವಹಣೆಗೆ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರಿಗೆ ಬೆಳೆ ವಿಮೆ ಪಡೆಯುವುದು ಕಷ್ಟಕರವಾಗಿದೆ ಎಂದು ತಿಳಿಸಿದರು. ಅಂಬೇವಾಡಿ ರೈಲು ನಿಲ್ದಾಣ ತಮ್ಮ ಸಾಧನೆ ಎಂದು ಹೇಳಿಕೊಳ್ಳುವ ದೇಶಪಾಂಡೆ, ಅಂಬೇವಾಡಿಯಿಂದ ಹಳೆ ದಾಂಡೇಲಿ ತನಕ ರೈಲು ಸಂಚಾರ ಏಕೆ ಆರಂಭಿಸಲಿಲ್ಲ ಎಂದು ಪ್ರಶ್ನಿಸಿದರು. ಹಿಂದೆ ಇದ್ದ ರೈಲು ಹಳಿ ಮಾರ್ಗದ ಸುತ್ತಮುತ್ತ ಆಶ್ರಯ ಮನೆಗಳನ್ನು ನಿರ್ಮಿಸಿರುವುದರಿಂದ ರೈಲ್ವೆ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಆರೋಪಿಸಿದರು.

ಸಚಿವ ಸ್ಥಾನಕ್ಕಾಗಿ ಹಪಾಹಪಿ, ಜಿಲ್ಲೆಗೆ ಅನ್ಯಾಯ: ದೇಶಪಾಂಡೆ ಅವರು ಪ್ರವಾಸೋದ್ಯಮ ಹಾಗೂ ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಜಿಲ್ಲೆಗೆ ನೀಡಿದ ಕೊಡುಗೆ ಶೂನ್ಯವಾಗಿದೆ. ಒಂದು ವಿಶ್ವವಿದ್ಯಾಲಯ, ಹಾಲಿನ ಡೇರಿ ಅಥವಾ ಸುಸಜ್ಜಿತ ಆಸ್ಪತ್ರೆ ಸ್ಥಾಪಿಸಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ರೋಗಿಗಳನ್ನು ಧಾರವಾಡ ಅಥವಾ ಹುಬ್ಬಳ್ಳಿಗೆ ಕಳುಹಿಸುವ ಸ್ಥಿತಿ ನಿರ್ಮಾಣವಾಗಿದೆ. ದಾಂಡೇಲಿಯಲ್ಲಿ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಪ್ರವಾಸೋದ್ಯಮ ಮಾಹಿತಿ ಕೇಂದ್ರ ಹಾಗೂ ಯಾತ್ರಿ ನಿವಾಸಗಳು ಪಾಳುಬಿದ್ದಿವೆ. ಕೈಗಾರಿಕಾ ಸಚಿವರಾಗಿದ್ದಾಗ ಹೊಸ ಕೈಗಾರಿಕೆ ತರಲು ವಿಫಲರಾಗಿದ್ದು, ಇದ್ದ ಕಾರ್ಖಾನೆಗಳು ಮುಚ್ಚಲು ಅವರೇ ಕಾರಣ ಎಂದರು.

ಆತ್ಮಾವಲೋಕನಕ್ಕೆ ಕರೆ: ಕಳೆದ 45 ವರ್ಷಗಳಲ್ಲಿ ಹಳಿಯಾಳ ಕ್ಷೇತ್ರಕ್ಕೆ ದೇಶಪಾಂಡೆ ನೀಡಿದ ಕೊಡುಗೆ ಏನು ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಸವಾಲು ಹಾಕಿದರು. ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಸರ್ಕಾರಿ ಆಸ್ತಿ ಅತಿಕ್ರಮಣಗಳಿಗೆ ಕಡಿವಾಣ ಇಲ್ಲದಂತಾಗಿದೆ ಎಂದು ಹೇಳಿದರು.

ಕಾಗೇರಿ ಅವರು ರೈತರಿಗೆ ಬೆಳೆ ವಿಮೆ ಕೊಡಿಸಿದ್ದು, ನೆಟ್‌ವರ್ಕ್ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಅವರನ್ನು ಟೀಕಿಸುವ ಮೊದಲು ದೇಶಪಾಂಡೆ ತಮ್ಮ ಕ್ಷೇತ್ರದ ರಸ್ತೆಗಳನ್ನು ಶಿರಸಿ–ಸಿದ್ದಾಪುರ ರಸ್ತೆಗಳೊಂದಿಗೆ ಹೋಲಿಸಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ನಾಯಕರ ಪ್ರತಿಕ್ರಿಯೆ: ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಜಗದೀಶ ನಾಯಕ ಮೊಗಟ ಮಾತನಾಡಿ, ಕಾಗೇರಿ ಕುರಿತು ದೇಶಪಾಂಡೆ ಆಡಿರುವ ಮಾತುಗಳು ಅವರ ಆತ್ಮಸಾಕ್ಷಿಗೆ ವಿರುದ್ಧವಾಗಿವೆ ಎಂದರು. ಸಂಸದರಾಗಿ ಕಾಗೇರಿ ಎಲ್ಲರಿಗೂ ಲಭ್ಯರಾಗಿದ್ದಾರೆ ಎಂದು ಶ್ಲಾಘಿಸಿದರು. ಈ ಹಿಂದೆ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಮಾರಕ ಯೋಜನೆಗಳನ್ನು ತಂದಾಗ, ಅವುಗಳನ್ನು ಕೇಂದ್ರ ಮಟ್ಟದಲ್ಲಿ ತಡೆಹಿಡಿಯುವಲ್ಲಿ ಕಾಗೇರಿ ಅವರ ಪಾತ್ರ ಪ್ರಮುಖವಾಗಿತ್ತು ಎಂದು ತಿಳಿಸಿದರು.

ಇದಲ್ಲದೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆರ್‌ಎಸ್‌ಎಸ್ ಕಂಡರೆ ಭಯ ಶುರುವಾಗಿದೆ ಎಂದು ಟೀಕಿಸಿದರು. ಜಿಲ್ಲೆಯಲ್ಲಿನ ಬಿಜೆಪಿ ಸಂಘಟನೆ ಬಲಿಷ್ಠವಾಗಿದ್ದು, ಕಾಂಗ್ರೆಸ್ ಠೇವಣಿ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.

ಉಪಸ್ಥಿತಿ: ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬ್ಳೆ, ಸೂರಜ್ ಸೋನಿ, ನಾಗೇಶ್ ಕುರುಡೇಕರ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

Previous articleಶಿಕ್ಷಣ ಕ್ಷೇತ್ರದ ದಿಗ್ಗಜ ಡಾ. ಸಿಎ ಎ. ರಾಘವೇಂದ್ರ ರಾವ್ ನಿಧನ
Next articleಜಾಗತಿಕ ಮಟ್ಟದಲ್ಲಿ Youtube ಸಮಸ್ಯೆ: ಬಳಕೆದಾರರ ಪರದಾಟ