ಮಂಗನ ಕಾಯಿಲೆ ನಿಯಂತ್ರಣಕ್ಕೆ ಶಿರಸಿಯಲ್ಲಿ ಶೀಘ್ರವೇ ಹೊಸ ಪ್ರಯೋಗಾಲಯ

0
6

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಣೆ

ದಾಂಡೇಲಿ: ಮಲೆನಾಡು ಹಾಗೂ ಕರಾವಳಿ ಭಾಗದ ಜನರನ್ನು ಪ್ರತಿ ವರ್ಷ ಆತಂಕಕ್ಕೆ ದೂಡುವ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್ – KFD) ನಿಯಂತ್ರಣಕ್ಕೆ ಮಹತ್ವದ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶೀಘ್ರದಲ್ಲೇ ಹೊಸ ಪ್ರಯೋಗಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಬಳಿಕ ಈ ಮಾಹಿತಿ ನೀಡಲಾಗಿದ್ದು, ಪ್ರಸ್ತುತ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಮಂಗನ ಕಾಯಿಲೆ ಪರೀಕ್ಷಾ ಪ್ರಯೋಗಾಲಯದ ಮೇಲೆ ಭಾರೀ ಒತ್ತಡ ಇರುವ ಹಿನ್ನೆಲೆಯಲ್ಲಿ ಎರಡನೇ ಪ್ರಯೋಗಾಲಯವನ್ನು ಶಿರಸಿಯಲ್ಲಿ ಆರಂಭಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ ಬಸ್‌ ದುರಂತ: ಪಿಎಂ, ಸಿಎಂ ಸಂತಾಪ

ಉಪಕರಣಗಳ ಖರೀದಿ ಪೂರ್ಣ – ಶೀಘ್ರ ಚಾಲನೆ: ಶಿರಸಿಯಲ್ಲಿ ಸ್ಥಾಪಿಸಲಾಗುತ್ತಿರುವ ಈ ಪ್ರಯೋಗಾಲಯಕ್ಕೆ ಅಗತ್ಯವಿರುವ ತಾಂತ್ರಿಕ ಉಪಕರಣಗಳು ಹಾಗೂ ವೈದ್ಯಕೀಯ ಸಾಧನಗಳನ್ನು ಆರೋಗ್ಯ ಇಲಾಖೆ ಈಗಾಗಲೇ ಖರೀದಿಸಿದೆ. ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಅತಿ ಶೀಘ್ರದಲ್ಲೇ ಪ್ರಯೋಗಾಲಯ ಕಾರ್ಯಾರಂಭ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್–ಜೂನ್ ಅವಧಿಯಲ್ಲಿ ಹೆಚ್ಚುವರಿ ನಿಗಾ: ಪ್ರತಿ ವರ್ಷ ಅಕ್ಟೋಬರ್‌ನಿಂದ ಜೂನ್ ತಿಂಗಳವರೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಸೇರಿದಂತೆ ಅರಣ್ಯ ಪ್ರದೇಶಗಳ ಸುತ್ತಮುತ್ತ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಹಿನ್ನೆಲೆ, ಶಿರಸಿ ಪ್ರಯೋಗಾಲಯದಿಂದಲೇ ಕಾಯಿಲೆಯನ್ನು ತಕ್ಷಣ ಪತ್ತೆಹಚ್ಚಿ ಚಿಕಿತ್ಸೆ ನೀಡುವ ಮೂಲಕ ಸಾವಿನ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವುದು ಆರೋಗ್ಯ ಇಲಾಖೆಯ ಮುಖ್ಯ ಉದ್ದೇಶವಾಗಿದೆ.

ಈಗಾಗಲೇ 13 ಮಂದಿಗೆ ಚಿಕಿತ್ಸೆ: ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗ, ಚಿಕ್ಕಮಂಗಳೂರು, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತಪಾಸಣೆ ನಡೆಸಲಾಗಿದೆ. ಈ ವೇಳೆ 13 ಜನರಲ್ಲಿ ಮಂಗನ ಕಾಯಿಲೆ ದೃಢಪಟ್ಟಿದ್ದು, ಅವರಿಗೆ ತಕ್ಷಣ ಸೂಕ್ತ ಚಿಕಿತ್ಸೆ ನೀಡಿ ಪೂರ್ಣವಾಗಿ ಗುಣಪಡಿಸಲಾಗಿದೆ.

ಇದನ್ನೂ ಓದಿ: ಖ್ಯಾತ ಹಿಂದೂಸ್ತಾನಿ ಗಾಯಕ ಅಶೋಕ ಹುಗ್ಗಣ್ಣವರ ನಿಧನ

ಇಲಾಖೆಯ ಸನ್ನದ್ಧತೆ: ಮಂಗನ ಕಾಯಿಲೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಂಪೂರ್ಣ ಸಿದ್ಧವಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವುದು, ತ್ವರಿತ ತಪಾಸಣೆ, ಚಿಕಿತ್ಸಾ ಸೌಲಭ್ಯ ಮತ್ತು ಲಸಿಕೆ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ. ಶಿರಸಿಯಲ್ಲಿ ಹೊಸ ಪ್ರಯೋಗಾಲಯ ಆರಂಭವಾಗುವುದರಿಂದ ಉತ್ತರ ಕನ್ನಡ ಹಾಗೂ ಮಲೆನಾಡು ಭಾಗದ ಜನರಿಗೆ ದೊಡ್ಡ ಅನುಕೂಲವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

Previous articleಖ್ಯಾತ ಹಿಂದೂಸ್ತಾನಿ ಗಾಯಕ ಅಶೋಕ ಹುಗ್ಗಣ್ಣವರ ನಿಧನ