ಶಿರಸಿ ಕಂದಾಯ ಜಿಲ್ಲೆ ರಚನೆಗೆ ಒತ್ತಾಯ
ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರವನ್ನು ಸೇರಿಸಿ ಸಾಗರ ಜಿಲ್ಲೆ ಮಾಡುವಂತೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಪ್ರಸ್ತಾಪಕ್ಕೆ ಶಿರಸಿ, ಸಿದ್ದಾಪುರ, ಯಲ್ಲಾಪುರ, ದಾಂಡೇಲಿಯ ಹಲವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಆರ್.ಹೆಗಡೆ ಕುಂಬಾರಕುಳಿ ಮತ್ತು ಇತರ ತಾಲೂಕು ಸಂಘಟನೆಗಳು ಸಿದ್ದಾಪುರವನ್ನೊಳಗೊಂಡ ಶಿರಸಿಯನ್ನೇ ಪ್ರತ್ಯೇಕ ಜಿಲ್ಲೆಯಾಗಿಸುವಂತೆ ಒತ್ತಾಯಿಸಿದ್ದಾರೆ. ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳನ್ನು ಸೇರಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಹಿಂದೆ ಶಿಕ್ಷಣ ಸಚಿವರಾಗಿದ್ದಾಗ ಶಿರಸಿ ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡಿದ್ದಾರೆ.
ಹಾಗೆಯೇ ಶಿರಸಿ ಕಂದಾಯ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು. ಪ್ರಸ್ಥಾಪಿತ ಸಾಗರ ಜಿಲ್ಲೆಗೆ ಸಿದ್ದಾಪುರ ತಾಲೂಕನ್ನು ಸೇರಿಸುವ ವಿಚಾರ ತೀರಾ ಅವೈಜ್ಞಾನಿಕವಾಗಿದೆ. ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯನ್ನು ಕಿತ್ತೂರು ಕರ್ನಾಟಕವೆಂದು ಕರೆಯಲಾಗುತ್ತಿದ್ದು, ಬೆಳಗಾವಿ ವಿಭಾಗಕ್ಕೆ ಸೇರುತ್ತದೆ.
ಸಾಗರವನ್ನೊಳಗೊಂಡ ಶಿವಮೊಗ್ಗ ಜಿಲ್ಲೆ ಹಳೇ ಮೈಸೂರು ಪ್ರಾಂತ್ಯಕ್ಕೆ ಸೇರಿದ್ದಾಗಿದೆ. ಬಹುತೇಕ ಸರಕಾರಿ ಇಲಾಖೆಗಳ ವಿಭಾಗೀಯ ಕಚೇರಿಗಳು ಬೆಳಗಾವಿಯಲ್ಲಿದೆ. ಹೆಸ್ಕಾಂ, ಹುಬ್ಬಳ್ಳಿಯಲ್ಲಿದ್ದರೆ, ಹೈಕೋರ್ಟ್ ಧಾರವಾಡದಲ್ಲಿದೆ. ಸಾಗರ, ಶಿವಮೊಗ್ಗ ವಿಭಾಗೀಯ ಕಚೇರಿ, ಹೈಕೋರ್ಟ್ ಬೆಳಗಾವಿ ವಿಭಾಗ ವ್ಯಾಪ್ತಿಗೆ ಬರುವದಿಲ್ಲ. ಈ ಕಾರಣದಿಂದ ಪ್ರಸ್ಥಾಪಿತ ಸಾಗರ ಜಿಲ್ಲೆಗೆ ಸಿದ್ದಾಪುರ ಸೇರ್ಪಡೆ ಎಲ್ಲ ರೀತಿಯಿಂದಲೂ ಅವೈಜ್ಞಾನಿಕವೆಂದು ಹೇಳಲಾಗಿದೆ.