ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಸಿಂಗಳಿಕ ಬದುಕು ಅಪಾಯದಂಚಿಗೆ?

0
76

ಉತ್ತರ ಕನ್ನಡ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಯೋಜನೆಗೆ ಕೇಂದ್ರ ಪರಿಸರ, ಅರಣ್ಯ ಹಾಗೂ ವಾಯುಗುಣ ಬದಲಾವಣೆ ಸಚಿವಾಲಯ ಮತ್ತು ರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಮಂಡಳಿ ಅನುಮತಿ ನೀಡಿದೆ.

2000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಈ ಯೋಜನೆಯ ಉದ್ದೇಶ. ಈ ಯೋಜನೆ ಜಾರಿಯಾದಲ್ಲಿ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿರುವ ಅಳಿವಿನಂಚಿನಲ್ಲಿರುವ ಜಗತ್ತಿನ ಅತ್ಯಂತ ಹಳೆಯ ಜಾತಿಯ ವಾನರ ಸಿಂಹ ಬಾಲದ ಸಿಂಗಳಿಕದ ಅಸ್ತಿತ್ವದ ಮೇಲೆ ಅಪಾಯವಾಗಲಿದೆ. ಅವುಗಳ ಬದುಕು, ರಕ್ಷಣೆಯ ಬಗ್ಗೆ ಆತಂಕ ಮೂಡಿದೆ.

ಈಗಾಗಲೇ ಈ ಯೋಜನೆಗೆ ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ, ಶಿವಮೊಗ್ಗ ಜಿಲ್ಲೆಯ ತಳಕಳಲೆ ಜಲಾಶಯಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಆದರೆ ಈ ಯೋಜನೆ ಜಾರಿಯಾಗುತ್ತಿರುವ ಶರಾವತಿ ಕಾಡುಗಳಲ್ಲಿ ಅಳಿವಿನಂಚಿನಲ್ಲಿರುವ ಸಿಂಹಬಾಲದ ಸಿಂಗಳಿಕ ವನ್ಯಜೀವಿ ಅಭಯಾರಣ್ಯ ಮತ್ತು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯದ ಒಳಗೆ ಬರುವುದರಿಂದ ಪ್ರಭಲ ವಿರೋಧ ವ್ಯಕ್ತವಾಗುತ್ತಿದೆ.

ಸಾರ್ವಜನಿಕ ಅಹವಾಲು ಸಭೆ: ಸ್ಥಳೀಯರ ವಿರೋಧದ ನಡುವೆ ಯೋಜನೆ ಜಾರಿಯಾದಲ್ಲಿ ಅಪರೂಪದ ಸಿಂಗಳೀಕ ಬದುಕಿನ ಮೇಲೂ ಪರಿಣಾಮ ಬೀರಲಿದೆ. ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪೆ ಹಾಗೂ ಆಗುಂಬೆ ಘಟ್ಟದ ಶರಾವತಿ ಕಾಡುಗಳಲ್ಲಿ ಕಾಣು ಸಿಗುವ ಈ ವಾನರ ಕೇವಲ ಸಮೃದ್ಧವಾದ ಕಾಡುಗಳಲ್ಲಿ ಮಾತ್ರ ಕಾಣು ಸಿಗುತ್ತದೆ. ಅಪರೂಪದ ಅಳಿವಿನಂಚಿನಲ್ಲಿರುವ ಸಿಂಗಳಿಕದ ರಕ್ಷಣೆಯ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ.

2023ರಲ್ಲಿಯೇ ಕರ್ನಾಟಕದ ಅರಣ್ಯ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿತ್ತು. ಕರ್ನಾಟಕದಲ್ಲಿ ‘ಸಿಂಗಳಿಕ’ ಎಂದು ಕರೆಯಲ್ಪಡುವ ಸಿಂಹ-ಬಾಲದ ಕೋತಿಗಳು ​​ಅಳಿವಿನಂಚಿನಲ್ಲಿರುವ ಪ್ರಭೇದಗಳಾಗಿವೆ ಎಂದು ಹೇಳಿತ್ತು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿ ಮಾಡಿದರೆ ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ. ಈ ಯೋಜನೆಗೆ 2017ರಲ್ಲಿ 4 ಸಾವಿರ ಕೋಟಿ ರೈ. ನಿಗದಿಗೊಳಿಸಲಾಗಿತ್ತು. 2020ರಲ್ಲಿ ಇದು 5 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. 2024ರಲ್ಲಿ 8 ಸಾವಿರ ಕೋಟಿ, ಈಗ 10,000 ಕೋಟಿ ಎಂದು ಅಂದಾಜಿಸಲಾಗಿದೆ. ಯೋಜನೆ ಪೂರ್ಣಗೊಳ್ಳುವ ಹೊತ್ತಿಗೆ ವೆಚ್ಚ ಎಷ್ಟಾಗಲಿದೆ? ಎಂಬುದು ಚರ್ಚೆಯ ವಿಚಾರ.

Previous articleನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆ: ಕಡಿಮೆಯಾದ ಸಂಚಾರ ದಟ್ಟಣೆ
Next articleಉಪರಾಷ್ಟ್ರಪತಿ ಚುನಾವಣೆ: NDA ಅಭ್ಯರ್ಥಿ ನಾಮಪತ್ರ ಸಲ್ಲಿಕೆ

LEAVE A REPLY

Please enter your comment!
Please enter your name here