ದಾಂಡೇಲಿ : ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ಹಿಂದಿನ ಬಿಜೆಪಿ ಸರ್ಕಾರ ಅನುಮತಿಸಿವೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.
ಕಾರವಾರದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜನರಿಗೆ ತೊಂದರೆಯಾದರೆ ಯೋಜನೆಗೆ ನನ್ನ ವೈಯಕ್ತಿಕ ವಿರೋಧ ಇದೆ ಎಂದು ಬಹಳ ಹಿಂದೆಯೇ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ ಎಂದರು. ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಎರಡು ಜಿಲ್ಲೆಯಲ್ಲಿ ಹಂಚಿ ಹೋಗಿದೆ. ಅಲ್ಲಿನ ಸಂಸದರು, ಶಾಸಕರ ಅಭಿಪ್ರಾಯ ಸಹ ಮುಖ್ಯ.
ಮೇಲಾಗಿ ಈ ಯೋಜನೆ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಹೆಜ್ಜೆ ಇಟ್ಟಿದ್ದಾರೆ. ಅಧ್ಯಯನ ನಡೆಯುತ್ತಲೇ ಇದೆ. ಅವರು ಸೂಕ್ತವಾದ ನಿರ್ಧಾರಕ್ಕೆ ಬರುತ್ತಾರೆ. ಸರ್ಕಾರದ ವಿವಿಧ ಇಲಾಖೆಯ ಎಕ್ಸಪರ್ಟ್ಸ ನಿರ್ಧಾರ ಮಾಡ್ತಾರೆ. ನಾವು ಹಲವು ಯೋಜನೆಗಳ ಬಗ್ಗೆ ಸಹಕಾರ ನೀಡಿದ್ದೇವೆ. ಕೈಗಾ,ಸೀಬರ್ಡ, ಕಾಳಿ ಪವರ್ ಪ್ರೋಜೆಕ್ಟಗೆ ಅವಕಾಶ ಕೊಟ್ಟಿದ್ದೇವೆ ಎಂದರು.
ಬೇಡ್ತಿ ವರದಾ ನದಿ ಜೋಡಣೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ವೈದ್ಯರು ಈ ಯೋಜನೆ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ , ಖುದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಇದು ಬಹಳ ಸಂತೋಷದ ವಿಷಯ. ಆ ಭಾಗದ ಶಾಸಕರು, ವಿಧಾನ ಪರಿಷತ್ ಸದಸ್ಯರು ಹೋಗಿದ್ದಾರೆ. ಇದನ್ನು ತಡೆಯುವ ಶಕ್ತಿ ಕೇಂದ್ರ ಸರ್ಕಾರಕ್ಕೆ ಇದೆ. ಅವರದೇ ಸರ್ಕಾರದ ಯೋಜನೆ ಇದು.
ಸಂಸದ ಬಸವರಾಜ ಬೊಮ್ಮಾಯಿ ಬೇಡ್ತಿ ನದಿ ಜೋಡಣೆ ಯೋಜನೆ ಬೇಕು ಎಂದಿದ್ದಾರೆ. ನಮ್ಮ ಮುಖ್ಯಮಂತ್ರಿ ತಜ್ಞರ ಸಭೆ ಕರೆದು ಮತ್ತೊಮ್ಮೆ ಸಭೆ ಮಾಡೋಣ ಎಂದಿದ್ದಾರೆ. ಈ ಬಗ್ಗೆ ಮುಂದೆ ಏನಾಗಲಿದೆ ಎಂದು ನೋಡೋಣ ಎಂದರು. ಸಚಿವರ ಜೊತೆ ಬಿಜೆಪಿ ಎಂಎಲ್ಸಿ ಗಣಪತಿ ಉಳ್ವೇಕರ್ ಇದ್ದರು .


























