ದಾಂಡೇಲಿ: ಕಾರವಾರ ಮೆಡಿಕಲ್ ಕಾಲೇಜು ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆ (ಕ್ರಿಮ್ಸ್ ) ಮಾಜಿ ನಿರ್ದೇಶಕ ಡಾ. ಗಜಾನನ ನಾಯಕ ಅವರು ತಮ್ಮ ಕಾರ್ಯಾವಧಿಯಲ್ಲಿ ವೈದ್ಯ ವಿದ್ಯಾರ್ಥಿಯೋರ್ವರ ಮೇಲೆ ಎಸಗಿದ ಪರಿಶಿಷ್ಟ ಜಾತಿ ದೌರ್ಜನ್ಯದ ಆರೋಪವು ತನಿಖೆಯಲ್ಲಿ ದೃಢಪಟ್ಟಿದ್ದರಿಂದ ಏಳು ದಿನಗಳ ಒಳಗಾಗಿ ಶಿಸ್ತು ಕ್ರಮ ಜರುಗಿಸಿ, ವರದಿ ನೀಡುವಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ಸೆಪ್ಟಂಬರ್ 3ರಂದು ಸರ್ಕಾರಕ್ಕೆ ಪತ್ರ ಬರೆದು ಗಡುವು ನೀಡಿದೆ.
2025ರ ಮೇ 5ರಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯ ವಡ್ಡೆ ಪಳ್ಳಿ ರಾಮಚಂದ್ರ ಅವರ ನೇತೃತ್ವದಲ್ಲಿ ನಡೆದ ವಿಚಾರಣೆಯ ಕುರಿತು ಕ್ರಮ ಕೈಗೊಂಡ ವರದಿ(ATR )ಇನ್ನೂ ಆಯೋಗಕ್ಕೆ ಸಲ್ಲಿಕೆಯಾಗಿಲ್ಲ ಎಂದು ಪತ್ರದಲ್ಲಿ ವಿವರಿಸಲಾಗಿದೆ. 2025ರ ಜೂನ್ 20 ರಂದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಪತ್ರ ಕಳುಹಿಸಲಾಗಿತ್ತು. ಆದರೆ ವರದಿ ಲಭ್ಯವಾಗದ ಕಾರಣ 2025ರ ಸೆಪ್ಟಂಬರ್ 3ರಂದು ಮತ್ತೊಮ್ಮೆ ಪತ್ರ ಕಳುಹಿಸಲಾಗಿದೆ.
ಈ ವರದಿಯನ್ನು ಸ್ವೀಕರಿಸಿದ 7 ದಿನಗಳ ಒಳಗಾಗಿ ಸಲ್ಲಿಸಲು ಸೂಚಿಸಲಾಗಿದೆ. ಈ ಪ್ರಕರಣವು ಕಾರವಾರದ ಕ್ರಿಮ್ಸ್ ವೈದ್ಯಕೀಯ ಕಾಲೇಜಿನ ಹೌಸ್ ಡಾಕ್ಟರ್ ಡಾ. ಸಂದೀಪ ಎನ್. ಅವರು 2023ರ ಜೂನ್ 12 ರಂದು ಕ್ರಿಮ್ಸ್ ನಿರ್ದೇಶಕ ಡಾ. ಗಜಾನನ ನಾಯಕ ವಿರುದ್ಧ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಕಾರವಾರ ಮೆಡಿಕಲ್ ಕಾಲೇಜು ನಿರ್ದೇಶಕರು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಮೇಲೆ ಕಿರುಕುಳ ನೀಡುತ್ತಿದ್ದಾರೆ. ಮತ್ತು ಅವರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡದೆ ಭೇದ ಭಾವ ತೋರಿಸುತ್ತಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ 2024ರ ಮಾರ್ಚ್ 12 ರಂದು ವರದಿ ಸಲ್ಲಿಕೆಯಾಗಿದ್ದು ಅದರ ಪ್ರತಿಯನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ದೂರುದಾರರಿಗೆ ಕಳುಹಿಸಿದೆ ಈಗಾಗಲೇ ಮಾಜಿ ನಿರ್ದೇಶಕ ಗಜಾನನ ನಾಯಕ ಅವರ ನಿವೃತ್ತಿ ವೇತನ ಸೌಲಭ್ಯ ತಡೆಹಿಡಿಯಲಾಗಿದೆ.