ಸಾಹಿತ್ಯ ಪರಿಷತ್ತು ಕನ್ನಡಿಗರ ಸ್ವತ್ತು: ಸಾಹಿತಿ ಬರಗೂರು ರಾಮಚಂದ್ರಪ್ಪ

0
3

ದಾಂಡೇಲಿ: ಸಾಮರಸ್ಯವೆಂಬ ಉದಾತ್ತ ಮೌಲ್ಯದೊಂದಿಗೆ ಜೀವನದಲ್ಲಿ ಸಮಾನತೆಯನ್ನು ಅಳವಡಿಸಿಕೊಳ್ಳಬೇಕಿದೆ. ಸಮಾನತೆಯಿಂದ ಸಾಮರಸ್ಯದೆಡೆಗೆ ಸಮಾಜ ಬದಲಾಗಿದ್ದು, ಮಾನವೀಯತೆ ಜಾಗೆಯನ್ನು ಇಂದು ಮತೀಯತೆ, ಉನ್ಮಾದಗಳಿಂದ ತುಂಬಿದ್ದು, ಭಿನ್ನಾಭಿಪ್ರಾಯಗಳ ನಡುವೆಯೂ ಸಾಮರಸ್ಯದಿಂದ ಬದುಕುತ್ತಿದ್ದೆವೆ. ಇದೇ ನಿಜವಾದ ಪ್ರಜಾಪ್ರಭುತ್ವ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ನ್ಯಾಯಾಲಯದ ಷರತ್ತುಬದ್ಧ ಆದೇಶದನ್ವಯ ದಾಂಡೇಲಿಯ ಹಳೇ ನಗರಸಭಾ ಮೈದಾನದಲ್ಲಿ ಉತ್ತರ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಾ. ಎನ್.ಆರ್. ನಾಯಕ ವೇದಿಕೆಯಲ್ಲಿ ಉದ್ಘಾಟಿಸಿ ನಂತರ ಅವರು ಮಾತನಾಡಿದರು.

ಸಾಹಿತ್ಯ ಪರಿಷತ್ತು ಎಲ್ಲ ಕನ್ನಡಿಗರ ಸ್ವತ್ತು. ಕುರ್ಚಿಗಿಂತ ಮನುಷ್ಯ ಕುಬ್ಜನಾಗಬಾರದು. ಸಾಹಿತ್ಯವೆಂಬುದು ನಿಜವಾದ ಸಂವೇದನೆ. ಸೌಹಾರ್ದತೆ, ಸಾಮರಸ್ಯ, ಜಾತ್ಯಾತೀತ ಮೌಲ್ಯಗಳ ದೊಡ್ಡ ಪರಂಪರೆ. ಇಂತಹ ಉದಾತ್ತ ಪರಂಪರೆ ಕನ್ನಡ ಸಾಹಿತ್ಯಕ್ಕಿದೆ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ: 45 ವರ್ಷಗಳ ಐತಿಹಾಸಿಕ ಜಯ: ಥ್ಯಾಂಕ್ಯೂ ತಿರುವನಂತಪುರ ಎಂದ ಮೋದಿ

ಸ್ಥಳೀಯ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಮಾನವ ರಾಕ್ಷಸಿ ಪ್ರವರ್ತಿಯನ್ನು ಬಿಟ್ಟು ಒಳ್ಳೆ ಕೆಲಸಗಳತ್ತ ಗಮನ ಹರಿಸಬೇಕು. ಕಾಳಿನದಿಯ ತಟದಲ್ಲಿರುವ ದಾಂಡೇಲಪ್ಪ ದೇವಸ್ಥಾನ ಶಕ್ತಿಶಾಲಿ ದೇವಸ್ಥಾನ. ದೇವರ ಅನುಗ್ರಹದಿಂದ ದಾಂಡೇಲಿಗೆ ತಾಲೂಕು ಸ್ಥಾನಮಾನ ಸಿಕ್ಕಿದೆ. ಪ್ರವಾಸೋದ್ಯಮ ನಗರವಾಗಿ ಬೆಳೆದಿದೆ. ಇಲ್ಲಿರುವ ರೆಸಾರ್ಟ್, ಹೋಂ ಸ್ಟೇಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡುವಂತಾಗಬೇಕು. ಕನ್ನಡ ಭಾಷೆ, ಸಂಸ್ಕೃತಿಯ ಬೆಳಕು ಎಲ್ಲೆಡೆ ಹರಡಲಿ ಎಂದು ಆಶಿಸಿದರು.

ಸಮ್ಮೇಳಾನಾಧ್ಯಕ್ಷ ಸಾಹಿತಿ ರೋಹಿದಾಸ ನಾಯ್ಕ ಅವರು ತಮ್ಮ 36 ಪುಟಗಳ ಭಾಷಣದ ಪುಸ್ತಕವನ್ನು ವಿತರಿಸಿ, ಸಂಕ್ಷಿಪ್ತವಾಗಿ ಮಾತನಾಡಿ, ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಅಧ್ಯಯನದ ಕುರಿತು ವಿಶ್ಲೇಷಿಸಿ ಪ್ರತಿಭಾವಂತರ ಪಲಾಯನ ತಡೆಯುವ ಅಗತ್ಯವನ್ನು ಪ್ರತಿಪಾದಿಸಿದರು.

ಆಶಯ ಭಾಷಣಕ್ಕೆ ಅಜೀವ ಸದಸ್ಯರ ಆಕ್ಷೇಪ: ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಶಯ ಭಾಷಣ ಮಾಡಿದ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಬಿ.ಎನ್. ವಾಸರೆ, ಅಜೀವ ಸದಸ್ಯರು ಸರ್ಕಾರದ ಇಲಾಖೆಗಳ, ಕೇಂದ್ರ ಕ.ಸಾ.ಪ. ಅನುಮತಿ ಇಲ್ಲದೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ ಬಗ್ಗೆ ನ್ಯಾಯಾಲಯಕ್ಕೆ ತಡೆ ಕೋರಿ ದೂರು ದಾಖಲಿಸಿದ್ದನ್ನು ಕಟುವಾಗಿ ಟೀಕಿಸಿ, ತೊಡೆ ತಟ್ಟುವುದಾಗಿ ಹೇಳಿದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಜೀವ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಕೋರ್ಟಿಗೆ ಹೋದ ಅಜೀವ ಸದಸ್ಯರನ್ನು ದುಷ್ಟಕೂಟ, ವೈಯುಕ್ತಿಕವಾಗಿ ಬಂದರೆ ತೊಡೆ ತಟ್ಟಲು ಸಿದ್ಧ ಎಂದು ಪತ್ರಕರ್ತನೊಬ್ಬ ವರದಿ ಮಾಡಿದ್ದಾನೆ. ಇದಕ್ಕೆ ಆಶಯ ನುಡಿಯ ಅರ್ಥ, ಕನ್ನಡ ಭಾಷೆಯ ಮತ್ತು ಸಾಹಿತ್ಯದ ಗೌರವ. ತೊಡೆ ತಟ್ಟುವ ಅಹಂಕಾರ ಭಾಷೆ ಸಲ್ಲ. ವೇದಿಕೆ ಉರಿಸುವ ಭಾಷಣವಲ್ಲ. ಸಾಹಿತ್ಯ ಸಮ್ಮೇಳನವೆಂದರೆ ಸಂಸ್ಕಾರ, ಸಂವೇದನೆಯ ವೇದಿಕೆ. ಅಲ್ಲಿ ತೊಡೆ ತಟ್ಟುವ ಪದಗಳಿಗೆ ಅಹಂಕಾರಕ್ಕೆ ಜಾಗವಿಲ್ಲ. ಅಲ್ಲಿ ತಲೆತಗ್ಗಿಸಿ ಹೇಳುವ ಕೇಳುವ, ಕೇಳುವ ವಿನಯವೇ… ನಿಜವಾದ ಶಕ್ತಿ. ಪದಗಳು ಪವಿತ್ರವಾಗಬೇಕಾದ ಸ್ಥಳದಲ್ಲಿ ದೇಹ ಭಾಷೆಯ ದರ್ಪ ಮಾತನಾಡಿದರೆ ಅದು ಸಾಹಿತ್ಯವಲ್ಲ. ಸಂಸ್ಕೃತಿಯ ಸೋಲು.. ಇದರಿಂದ ಅರ್ಥವಾಗೋದು – ಕನ್ನಡದ ಹೆಸರಲ್ಲಿ ಕೂಗು, ದರ್ಪ, ನಡೆ ಇದು ಅಭಿಮಾನ ಎಂದು ಬಿಂಬಿಸುವ ಪರರ ಕಾಂಚಾಣ ಮೇಲಿನ ದುರಹಂಕಾರ ನರ್ತನವೆಂದು ಅಜೀವ ಸದಸ್ಯರು ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಆಮಂತ್ರಣ ಪತ್ರಿಕೆಯಲ್ಲಿ ಹೆಸರಿದ್ದ ಉದ್ವಾಟನಾ ಕಾರ್ಯಕ್ರಮಕ್ಕೆ ಬರಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ, ಜಿ.ಪಂ. ಸಿಇಓ, ಪೊಲೀಸ್ ವರಿಷ್ಠಾಧಿಕಾರಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರುಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಸಂಪ್ರದಾಯದಂತೆ ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಧ್ವಜ ಹಸ್ತಾಂತರ, ವಿಚಾರ ಸಂಕಿರಣ ನಡೆಯಿತು.

Previous article45 ವರ್ಷಗಳ ಐತಿಹಾಸಿಕ ಜಯ: ಥ್ಯಾಂಕ್ಯೂ ತಿರುವನಂತಪುರ ಎಂದ ಮೋದಿ