ಕುಡಿಯವ ನೀರು ಪೂರೈಸುವ ಝರಿ ನೀರಿನಲ್ಲಿ ಸತ್ತ ಕಾಡುಪ್ರಾಣಿಯ ಶವ

0
2

ದಾಂಡೇಲಿ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ತಾಲೂಕಾ ಕೇಂದ್ರ ಸ್ಥಾನವಾಗಿರುವ ಜೋಯಡಾ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಮೂಲವಾದ ಹುಡಸಾ ಝರಿಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಕಾಡು ಹಂದಿಯ ಶವ ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕುಡಿಯುವ ನೀರು ಪೂರೈಕೆಗೆ ಬಳಕೆಯಾಗುವ ಹುಡಸಾ ಪಂಪ್ ಹೌಸ್ ಸಮೀಪದ ನೀರಿನಲ್ಲಿ ಕಾಡುಪ್ರಾಣಿ ಸತ್ತು ಬಿದ್ದಿದ್ದರೂ, ಪಂಪ್ ಹೌಸ್ ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ತೀವ್ರ ನಿರ್ಲಕ್ಷ ತೋರಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಕೊಳೆತ ಪ್ರಾಣಿಯ ಶವ ಪತ್ತೆಯಾದರೂ ಕೂಡ ನೀರಿನ ಪೂರೈಕೆ ಮುಂದುವರಿದಿರುವ ಶಂಕೆ ವ್ಯಕ್ತವಾಗಿದ್ದು, ಇದರಿಂದ ಜೋಯಡಾ ಪಟ್ಟಣದ ನಾಗರಿಕರು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುವ ಭೀತಿಯಲ್ಲಿ ಬದುಕುವಂತಾಗಿದೆ. ಜನರ ಆರೋಗ್ಯದ ಬಗ್ಗೆ ದಿವ್ಯ ನಿರ್ಲಕ್ಷ ತಾಳಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನತೆಯ ಮುಂದಿಡಿ

ಈ ಹಿಂದೆಯೂ ಇದೇ ರೀತಿಯ ಘಟನೆಗಳು ಸಂಭವಿಸಿ ಸಾರ್ವಜನಿಕರಿಂದ ಪ್ರತಿಭಟನೆಗಳು ನಡೆದಿದ್ದವು. ಆಗ ಸಂಬಂಧಿಸಿದ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಮತ್ತೆ ಜನಾರೋಗ್ಯವನ್ನು ಲೆಕ್ಕಿಸದೇ ಇಂತಹ ಗಂಭೀರ ನಿರ್ಲಕ್ಷ ಮುಂದುವರಿದಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರ ಪ್ರಕಾರ, ಹುಡಸಾ ಝರಿ ನಾಲೆಯಲ್ಲಿ ಪತ್ತೆಯಾದ ಪ್ರಾಣಿ ಕಾಡು ಹಂದಿಯಾಗಿದ್ದು, ಅದು ಕಳ್ಳಬೇಟೆಗಾರರ ಗುಂಡೇಟಿಗೆ ಬಲಿಯಾಗಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಗುಂಡೇಟು ತಿಂದ ಪ್ರಾಣಿ ನೀರು ಕುಡಿಯಲು ಬಂದ ವೇಳೆ ಅಲ್ಲೇ ಮೃತಪಟ್ಟಿರಬಹುದೆಂದು ಹೇಳಲಾಗುತ್ತಿದೆ. ಈ ಸಂಬಂಧ ಸಮಗ್ರ ತನಿಖೆ ನಡೆಸಿದಾಗ ಮಾತ್ರ ಸತ್ಯಾಂಶ ಬೆಳಕಿಗೆ ಬರಬೇಕಿದೆ.

ಇದನ್ನೂ ಓದಿ: PMFBY ಯೋಜನೆ ಅನುಷ್ಠಾನ: ಕರ್ನಾಟಕಕ್ಕೆ ದೇಶದ ಎರಡನೇ ಸ್ಥಾನ

ಇನ್ನು ನೀರು ಸಂಗ್ರಹಿಸುವ ಟ್ಯಾಂಕಿನ ಸ್ಥಿತಿಯೂ ಅತ್ಯಂತ ಶೋಚನೀಯವಾಗಿದೆ. ಟ್ಯಾಂಕಿನ ಮೇಲ್ಚಾವಣಿ ಸಂಪೂರ್ಣವಾಗಿ ಕಿತ್ತುಹೋಗಿದ್ದು, ಕಬ್ಬಿಣದ ಸಲಾಖೆಗಳು ತುಕ್ಕು ಹಿಡಿದು ನೀರಿನೊಳಗೆ ಬೀಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ ನಡೆಯುತ್ತಿದೆ ಎನ್ನುವುದು ಕೇವಲ ಹೆಸರಿಗಷ್ಟೇ ಎಂಬ ಆರೋಪಗಳು ಕೇಳಿಬಂದಿವೆ.

ಇದನ್ನೂ ಓದಿ: ಹುಬ್ಬಳ್ಳಿ: ಕಾಲೇಜ್ ಹಾಸ್ಟೆಲ್‌ ಮೇಲಿಂದ ಬಿದ್ದು PUC ವಿದ್ಯಾರ್ಥಿ ಸಾವು

ಕೊಳೆತ ಪ್ರಾಣಿಯ ದೇಹ ಇದ್ದ ನೀರನ್ನೇ ಜನರು ಕುಡಿಯುವಂತಾಗಿರುವ ಸಾಧ್ಯತೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ತಕ್ಷಣವೇ ಕೊಳೆತ ಪ್ರಾಣಿಯ ಶವವನ್ನು ತೆರವುಗೊಳಿಸಿ, ನೀರು ಮೂಲವನ್ನು ಸಂಪೂರ್ಣವಾಗಿ ಶುದ್ಧಗೊಳಿಸಿ, ಜನಾರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.

Previous articlePMFBY ಯೋಜನೆ ಅನುಷ್ಠಾನ: ಕರ್ನಾಟಕಕ್ಕೆ ದೇಶದ ಎರಡನೇ ಸ್ಥಾನ