Home ನಮ್ಮ ಜಿಲ್ಲೆ ಉತ್ತರ ಕನ್ನಡ ಕಾರವಾರ: ಔಷಧಿ ನೀಡುವ ತಜ್ಞ- ಡಬ್ಬಲ್ ಬ್ಯಾರಲ್ ಗನ್‌ನಿಂದ ಆತ್ಮಹತ್ಯೆ

ಕಾರವಾರ: ಔಷಧಿ ನೀಡುವ ತಜ್ಞ- ಡಬ್ಬಲ್ ಬ್ಯಾರಲ್ ಗನ್‌ನಿಂದ ಆತ್ಮಹತ್ಯೆ

0
19

ದಾಂಡೇಲಿ (ಉತ್ತರ ಕನ್ನಡ): ಕಾರವಾರದ ಪಿಕಳೆ ನರ್ಸಿಂಗ್ ಹೋಂನಲ್ಲಿ ಔಷಧಿ ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ರಾಜು ಪಿಕಳೆ (ರಾಜೀವ್ ಪಿಕಳೆ) ಅವರು ಡಬಲ್ ಬ್ಯಾರಲ್ ಗನ್‌ನಿಂದ ಸ್ವತಃ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾ ಸಮೀಪದ ಹಟ್ಟಿಕೇರಿ ಗ್ರಾಮದಲ್ಲಿ ನಡೆದಿದೆ.

ಕಾರವಾರದ ಪಿಕಳೆ ನರ್ಸಿಂಗ್ ಹೋಂನ ವೈದ್ಯರಾದ ನಿತಿನ್ ಪಿಕಳೆ ಅವರ ಸಹೋದರರಾಗಿರುವ ರಾಜು ಪಿಕಳೆ ಅವರು, ತಮ್ಮ ನಿವಾಸದ ಅಂಗಳದಲ್ಲೇ ಡಬಲ್ ಬ್ಯಾರಲ್ ಗನ್ ಸಮೇತ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆ ಶುಕ್ರವಾರ (ಜನವರಿ 23) ಬೆಳಿಗ್ಗೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ:  ಜೋಯಿಡಾದಲ್ಲಿ ಅಡಿಕೆ ಕೊಯ್ಲಿನ ಭರಾಟೆ

ಮೃತ ರಾಜು ಪಿಕಳೆ ಅವರು ಕಳೆದ ಹದಿನೈದು ದಿನಗಳ ಹಿಂದೆ ಪಿಕಳೆ ನರ್ಸಿಂಗ್ ಹೋಂನಲ್ಲಿ ಅವಧಿ ಮೀರಿದ ಔಷಧಿ ನೀಡಿದ ಆರೋಪವನ್ನು ಎದುರಿಸುತ್ತಿದ್ದರು. ಈ ಸಂಬಂಧ ಅಪರಿಚಿತ ರೋಗಿಯ ಸಂಬಂಧಿಯೊಬ್ಬರು ಔಷಧಿ ವಿತರಿಸುವ ದೃಶ್ಯವನ್ನು ಗುಪ್ತವಾಗಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಈ ವಿಡಿಯೋ ವ್ಯಾಪಕವಾಗಿ ಹರಡಿದ ಬಳಿಕ ಪ್ರಕರಣ ಸಾರ್ವಜನಿಕ ಚರ್ಚೆಗೆ ಕಾರಣವಾಗಿತ್ತು.

ಈ ಘಟನೆ ಬಳಿಕ ರಾಜು ಪಿಕಳೆ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವಧಿ ಮೀರಿದ ಮಾತ್ರೆ ವಿತರಣೆ ಕಣ್ತಪ್ಪಿನಿಂದ ಸಂಭವಿಸಿದ್ದಾಗಿದೆ ಎಂದು ರಾಜು ಪಿಕಳೆ ಅವರು ಸಾರ್ವಜನಿಕವಾಗಿ ಕ್ಷಮೆ ಕೂಡ ಕೇಳಿದ್ದರು ಎನ್ನಲಾಗಿದೆ. ಆದರೂ ಸಾಮಾಜಿಕ ಒತ್ತಡ ಹಾಗೂ ಮಾನಸಿಕ ಸಂಕಷ್ಟ ಅವರನ್ನು ಕಾಡುತ್ತಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ:  ಹುಬ್ಬಳ್ಳಿ: ನವನಗರದಲ್ಲಿ ಚಿರತೆ ಪ್ರತ್ಯಕ್ಷ – ವೈರಲ್‌ ಆದ ವಿಡಿಯೋ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಂಕೋಲಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಈ ಘಟನೆ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಮೇಲಿನ ಒತ್ತಡ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಟ್ರಯಲ್‌ಗಳು ಮತ್ತು ಮಾನಸಿಕ ಆರೋಗ್ಯದ ಮಹತ್ವದ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

ಸೂಚನೆ: ಮಾನಸಿಕ ಒತ್ತಡ ಅಥವಾ ಸಂಕಷ್ಟದಲ್ಲಿರುವವರು ಸಹಾಯ ಪಡೆಯುವುದು ಅತ್ಯಂತ ಅಗತ್ಯ. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ಅಗತ್ಯವಿದ್ದಲ್ಲಿ ಸ್ಥಳೀಯ ಸಹಾಯವಾಣಿ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯಲು ಮನವಿ.