ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಂಡೇಲಿ ಸೇರಿದಂತೆ ಹಳಿಯಾಳ, ಜೋಯಡಾ ತಾಲೂಕಿಗೆ ಒಂದು, ಸಿರಸಿ, ಸಿದ್ದಾಪುರ, ಮುಂಡಗೋಡ ತಾಲೂಕಿಗೆ ಒಂದು, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿಗೆ ಸೇರಿ ಎರಡು ಸೇರಿ ಒಟ್ಟು 4 ಸಂಚಾರಿ ಆಸ್ಪತ್ರೆಯ ಘಟಕಗಳು ಹಾಗೂ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸಮೇತ ಸದ್ದಿಲ್ಲದೆ ಸೇವೆ ಸಲ್ಲಿಸಲಾರಂಭಿಸಿದ್ದಾರೆ.
ನಗರ ಹಾಗೂ ಗ್ರಾಮೀಣ ಪ್ರದೇಶದ ಕಟ್ಟಡ ಕಾರ್ಮಿಕರಿಗೆ ಸ್ಥಳದಲ್ಲೆ ಚಿಕಿತ್ಸೆ ನೀಡುವ ಮೂಲಕ ನೂರಾರು ಕಾರ್ಮಿಕರಿಗೆ ಆರೋಗ್ಯ ಸೇವೆ ನೀಡಿ ನೆರವಾಗುತ್ತಿದೆ. ಇದು ಕಟ್ಟಡ ಕಾರ್ಮಿಕರಿಗೆ ಕೆಲಸ ಮಾಡುವ ಸ್ಥಳದಲ್ಲೆ ಚಿಕಿತ್ಸೆ ಸಿಗುವಂತ ಅವಕಾಶವನ್ನು ಒದಗಿಸಿದೆ. ಕಾರ್ಮಿಕ ಸಚಿವ ಸಂತೋಷ ಲಾಡ್ ಈ ಯೋಜನೆ ನಿಜಕ್ಕೂ ಕಾರ್ಮಿಕರ ಆರೋಗ್ಯದ ಪಾಲಿಗೆ ಸಂಜೀವಿನಿಯಾಗಿದೆ.
ಈ ಸಂಚಾರಿ ಆಸ್ಪತ್ರೆಯ ಘಟಕಗಳು ದಿನಕ್ಕೊಂದು ಹಳ್ಳಿ, ಪಟ್ಟಣಗಳಲ್ಲಿ ಕಾರ್ಮಿಕರಿರುವೆಡೆ ಸಂಚರಿಸಿ, ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ಔಷದೋಪಚಾರ ಮಾಡುತ್ತಿದೆ. ಈ ಸಂಚಾರಿ ಆಸ್ಪತ್ರೆ ಘಟಕ ವ್ಯಾನ್ ನಲ್ಲಿ ರಕ್ತ ತಪಾಸಣೆ ಯಂತ್ರ, ಬಿ.ಪಿ. ಪರೀಕ್ಷೆ, ಕಣ್ಣಿನ ಪರೀಕ್ಷೆ ಯಂತ್ರಗಳಿವೆ. ತುರ್ತು ಚಿಕಿತ್ಸೆಯ ಸೌಲಭ್ಯದ ಜೊತೆಗೆ ನಾಯಿ ಕಡಿತ, ಹಾವು ಕಡಿತಕ್ಕೆ ತಕ್ಷಣ ನೀಡುವ ಔಷಧಗಳು ಲಭ್ಯವಿದೆ.
ಸಕ್ಕರೆ ಕಾಯಿಲೆ ಇದ್ದವರ ಪರೀಕ್ಷೆ ಮಾಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದರೆ, ತಕ್ಷಣ ವೈದ್ಯಕೀಯ ಸೌಲಭ್ಯವಿರುವ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ. ಪ್ರತಿ ಸಂಚಾರಿ ಘಟಕದಲ್ಲಿ ಇಬ್ಬರು ವೈದ್ಯರು, ಇಬ್ಬರು ಎಎನ್ ಎಂ, ಒಬ್ಬರು ನರ್ಸ್, ಪ್ಯಾರಾ ಮೆಡಿಶನ್ ನೀಡುವ ಒಬ್ಬರು, ಸಹಾಯಕ ಸಿಬ್ಬಂದಿಇರುತ್ತಾರೆ. ಕಾರ್ಮಿಕ ಇಲಾಖೆಯ ನೊಂದಾಯಿತ ಕಾರ್ಮಿಕರಿಗೆ ಈ ಸೌಲಭ್ಯ ಜಿಲ್ಲೆಯಾದ್ಯಂತ ಸಿಗುವಂತಾಗಿದೆ.