ದಾಂಡೇಲಿ: ಸ್ಥಳೀಯ ನಗರ ಸಭೆಗೆ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಹಂತ – 4 ರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು, ಸ್ಥಳೀಯ ಶಾಸಕರಾದ ಆರ್.ವಿ. ದೇಶಪಾಂಡೆ ಅವರು ಗುರುವಾರ ಹಳೇ ನಗರಸಭೆ ಮೈದಾನದಲ್ಲಿ ಶಿಲಾನ್ಯಾಸ ನೆರವೇರಿಸಿದರು.
ಒಟ್ಟು 7 ಕೋಟಿ ರೂಪಾಯಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, “ಕಳೆದ 35 ವರ್ಷಗಳಲ್ಲಿ ದಾಂಡೇಲಿ ಸಾಕಷ್ಟು ಬೆಳೆದಿದೆ. 43 ವರ್ಷಗಳ ರಾಜಕೀಯ ಜೀವನದಲ್ಲಿ ಒಂದು ಅವಧಿ ಬಿಟ್ಟು 9 ಬಾರಿ ನನ್ನನ್ನು ಶಾಸಕನಾಗಿ ಗೆಲ್ಲಿಸಿದ್ದಾರೆ. ರಾಜ್ಯದ ಅತ್ಯಂತ ಹಿರಿಯ ಶಾಸಕನನ್ನಾಗಿ ಮಾಡಿದ್ದಾರೆ.” ಎಂದು ನಗರದ ಜನತೆಗೆ ಕೃತಜ್ಞತೆ ಸಲ್ಲಿಸಿದರು.
ನಗರದಲ್ಲಿ ಸಾಕಷ್ಟು ಬಡ ಜನರಿದ್ದು, ಅವರಿಗಾಗಿ ಏನೆಲ್ಲ ಸಾಧ್ಯವೋ ಅದನ್ನೆಲ್ಲ ಮಾಡಿಸುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚ ಗ್ಯಾರಂಟಿ ಯೋಜನೆಯ ಮೂಲಕ ಬಡವರ, ಮಹಿಳೆಯರ ಅಭಿವೃದ್ಧಿಗಾಗಿ ನೆರವಾಗಿದ್ದಾರೆ. ನಗರದ ಮೂಲಭೂತ ಸೌಲಭ್ಯಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ ಎಂದರು.