ದಾಂಡೇಲಿ: ಆದಾಯ ಮೀರಿ ಅಕ್ರಮವಾಗಿ ಆಸ್ತಿ ಹಾಗೂ ಹಣ ಸಂಗ್ರಹಿಸಿದ ಆರೋಪದ ಹಿನ್ನಲೆಯಲ್ಲಿ ಹಳಿಯಾಳ ನಿವಾಸಿಯಾಗಿರುವ ಸಿದ್ದಾಪುರ ಕೋಲ್–ಸಿರ್ಸಿ ಗ್ರೂಪ್ ಗ್ರಾಮ ಸೇವಾ ಸಹಕಾರಿ ಸಂಘದ ಸಿಇಒ ಮಾರುತಿ ಯಶ್ವಂತ ಮಾಲ್ಟಿ ಅವರ ಮನೆಗಳು ಹಾಗೂ ಸಂಬಂಧಿತ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಸುಕಿನ ಜಾವ ಕಾರವಾರ, ಉಡುಪಿ ಹಾಗೂ ಮಂಗಳೂರು ಲೋಕಾಯುಕ್ತ ಘಟಕಗಳ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ವಿವಿಧೆಡೆ ಶೋಧನಾ ಕಾರ್ಯ ಆರಂಭಿಸಿವೆ. ಸಿದ್ದಾಪುರದಲ್ಲಿ ಲೋಕಾಯುಕ್ತ ಸಿಪಿಐ ವಿನಾಯಕ ಬಿಲ್ಲವ ಅವರ ನೇತೃತ್ವದಲ್ಲಿ ಎರಡು ಕಡೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ಕಾರ್ಯ ತೀವ್ರವಾಗಿ ನಡೆಯಿತು.
ಇದನ್ನೂ ಓದಿ: ಕಾರವಾರದಲ್ಲಿ 8 ವರ್ಷಗಳ ಬಳಿಕ ಪುನಾರಂಭವಾದ ‘ಕರಾವಳಿ ಉತ್ಸವ’
ಇದೇವೇಳೆ ಹಳಿಯಾಳದಲ್ಲಿ ಕಾರವಾರ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯಕ ಅವರ ನೇತೃತ್ವದ ತಂಡವು ಮಾರುತಿ ಯಶ್ವಂತ ಮಾಲ್ಟಿ ಅವರಿಗೆ ಸೇರಿದ ನಿವಾಸ ಹಾಗೂ ಬಟ್ಟೆ ಅಂಗಡಿಗಳ ಮೇಲೆ ದಾಳಿ ನಡೆಸಿ ಶೋಧನಾ ಕಾರ್ಯ ನಡೆಸಿತು. ಮನೆಗಳು, ವಾಣಿಜ್ಯ ಮಳಿಗೆಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಅಕ್ರಮ ಆಸ್ತಿ, ನಗದು ಹಣ ಹಾಗೂ ಆಸ್ತಿ ಸಂಬಂಧಿತ ಮಹತ್ವದ ದಾಖಲೆಗಳಿಗಾಗಿ ತಪಾಸಣೆ ನಡೆಸಲಾಗಿದೆ.
ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿ, ನಗದು ಹಣ, ಆಸ್ತಿ ವಿವರಗಳು, ಬ್ಯಾಂಕ್ ವ್ಯವಹಾರಗಳು ಹಾಗೂ ಇತರೆ ಆರ್ಥಿಕ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಶೋಧನಾ ಕಾರ್ಯ ಪೂರ್ಣಗೊಂಡ ಬಳಿಕ ವಶಪಡಿಸಿಕೊಳ್ಳಲಾದ ದಾಖಲೆಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಗೃಹಲಕ್ಷ್ಮೀ ತಿಂಗಳ ಕಂತು ಈ ವಾರ ರಿಲೀಸ್
ಈ ದಾಳಿಯಿಂದ ಸಹಕಾರಿ ಸಂಘ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸ್ಥಳೀಯ ಜನರಲ್ಲಿ ಕುತೂಹಲ ಮತ್ತು ಆತಂಕ ಉಂಟಾಗಿದೆ. ತನಿಖೆ ಮುಂದುವರಿದಂತೆ ಹೆಚ್ಚಿನ ಮಾಹಿತಿಗಳು ಹೊರಬೀಳುವ ನಿರೀಕ್ಷೆಯಿದೆ.






















