ಡಾ. ರಾಜೀವ್ ಪಿಕಳೆ ಆತ್ಮಹತ್ಯೆ ಪ್ರಕರಣ: ಮೂವರ ಬಂಧನ

0
5

ಕಾರವಾರ: ಕಾರವಾರದ ಖ್ಯಾತ ವೈದ್ಯರಾದ ಡಾ. ರಾಜೀವ್ ಪಿಕಳೆ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ವೈದ್ಯರನ್ನು ಮಾನಸಿಕ ಒತ್ತಡಕ್ಕೆ ಸಿಲುಕಿಸಿದ ಆರೋಪದ ಮೇಲೆ ಅಂಕೋಲಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಂಕೋಲಾ ತಾಲೂಕಿನ ಅವರ್ಸಾ ಸಮೀಪದ ಹಟ್ಟಿಕೇರಿ ಗ್ರಾಮದಲ್ಲಿರುವ ತಮ್ಮ ಮನೆಯ ಅಂಗಳದಲ್ಲಿ, ಡಾ. ರಾಜೀವ್ ಪಿಕಳೆ ಅವರು ತಮ್ಮದೇ ಡಬಲ್ ಬ್ಯಾರಲ್ ಗನ್‌ನಿಂದ ಗುಂಡು ಹಾರಿಸಿಕೊಂಡು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ತಿಳಿಯುತ್ತಿದ್ದಂತೆ ಅಂಕೋಲಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ: ರಾಜ್ಯ ಸರ್ಕಾರ ಹಾಗೂ ರಮಾನಾಥ ರೈ ವಿರುದ್ಧ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ವಾಗ್ದಾಳಿ

ವೈರಲ್ ವಿಡಿಯೋದಿಂದ ಮಾನಸಿಕ ಒತ್ತಡ?: ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು 15 ದಿನಗಳ ಹಿಂದೆ ಪಿಕಳೆ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಅವಧಿ ಮೀರಿದ (Expired) ಮಾತ್ರೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ರೋಗಿಯ ಸಂಬಂಧಿಕರು ವೈದ್ಯರನ್ನು ಪ್ರಶ್ನಿಸುವ ವಿಡಿಯೋವನ್ನು ಚಿತ್ರೀಕರಿಸಿದ್ದರು.

ಈ ಘಟನೆ ಅಜಾಗರೂಕತೆಯಿಂದ ನಡೆದ ಪ್ರಮಾದ ಎಂದು ಡಾ. ರಾಜೀವ್ ಪಿಕಳೆ ಅವರು ಸಾರ್ವಜನಿಕವಾಗಿ ಒಪ್ಪಿಕೊಂಡು ಕ್ಷಮೆಯನ್ನೂ ಕೇಳಿದ್ದರು. ಆದರೆ, ಈ ವಿಡಿಯೋವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಮಾಡಿದ್ದು, ವೈದ್ಯರ ಮೇಲೆ ತೀವ್ರ ಸಾಮಾಜಿಕ ಒತ್ತಡ ಉಂಟಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಕಾರ್ ದಹನ ಪ್ರಕರಣ: ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ

ಈ ವಿಡಿಯೋ ವೈರಲ್ ಆದ ಬಳಿಕ ವೈದ್ಯರು ತೀವ್ರವಾಗಿ ಬೇಸರಗೊಂಡಿದ್ದರು. ಸಾರ್ವಜನಿಕ ಟೀಕೆ, ಸಾಮಾಜಿಕ ಮಾಧ್ಯಮದ ನಿಂದನೆ ಮತ್ತು ಮಾನಸಿಕ ಖಿನ್ನತೆ ಕಾರಣವಾಗಿ ಅವರು ಈ ಅತೀವ ನಿರ್ಧಾರಕ್ಕೆ ಬಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೂವರು ಆರೋಪಿಗಳ ಬಂಧನ: ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಂಕೋಲಾ ಪೊಲೀಸರು, ವೈದ್ಯರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡಿದ ಆರೋಪದ ಮೇಲೆ ಕಾರವಾರ ತಾಲೂಕಿನ ವೈಲವಾಡ ಗ್ರಾಮದ ಸುಭಾಷ್, ಹರಿಶ್ಚಂದ್ರ ಮತ್ತು ಅನಿಲ್ ಎಂಬ ಮೂವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:  ಬಳ್ಳಾರಿ: ಜನಾರ್ದನ ರೆಡ್ಡಿ ‘ಮಾಡೆಲ್ ಹೌಸ್’ಗೆ ಬೆಂಕಿ: 8 ಯುವಕರು ವಶಕ್ಕೆ, ರೀಲ್ಸ್ ಶಂಕೆ

ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Previous articleರಾಜ್ಯ ಸರ್ಕಾರ ಹಾಗೂ ರಮಾನಾಥ ರೈ ವಿರುದ್ಧ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ವಾಗ್ದಾಳಿ