Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಪಡಿತರ ಅಕ್ಕಿ ಅಕ್ರಮ ಸಾಗಾಟ ಪತ್ತೆ: ₹3 ಲಕ್ಷ ಮೌಲ್ಯದ 192 ಚೀಲ ಜಪ್ತಿ

ಪಡಿತರ ಅಕ್ಕಿ ಅಕ್ರಮ ಸಾಗಾಟ ಪತ್ತೆ: ₹3 ಲಕ್ಷ ಮೌಲ್ಯದ 192 ಚೀಲ ಜಪ್ತಿ

0
94

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಪಡಿತರ (ರೇಷನ್) ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದು, ಸುಮಾರು ₹3.07 ಲಕ್ಷ ಮೌಲ್ಯದ ಅಕ್ಕಿ ಚೀಲಗಳನ್ನು ಜಪ್ತಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಐವರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಘಟನೆ ವಿವರ : ಆಹಾರ ನಿರೀಕ್ಷಕರಾದ ಮಂಜುನಾಥರೆಡ್ಡಿ ಸಿ. ಹುಚ್ಚಣ್ಣನವರ ಅವರು ನೀಡಿದ ದೂರಿನ ಮೇರೆಗೆ, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಅತ್ಯಾವಶ್ಯಕ ಸರಕುಗಳ ಅಧಿನಿಯಮ 1955ರ ಕಲಂ 3 ಮತ್ತು 7 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಮಾರ್ಚ್ 24ರಂದು ಮಧ್ಯಾಹ್ನ 4 ಗಂಟೆ ಸುಮಾರಿಗೆ ಅಂಕೋಲಾ ತಾಲೂಕಿನ ಬೆಳಸೆ ಗ್ರಾಮದ ತಳಗದ್ದೆ ಕ್ರಾಸ್ ಬಳಿ ಕಂದು ಬಣ್ಣದ ಟಾಟಾ ಕ್ಯಾಂಟರ್ (ಕೆಎ-22/ಎಎ-7127) ವಾಹನದಲ್ಲಿ ಅನುಮತಿ ಇಲ್ಲದೆ ಪಡೀತರ ಅಕ್ಕಿಯನ್ನು ಸಾಗಾಟ ಮಾಡಲಾಗುತ್ತಿತ್ತು.

ಅಕ್ಕಿ ಜಪ್ತಿ : ವಾಹನವನ್ನು ತಪಾಸಣೆ ಮಾಡಿದಾಗ ಭತ್ತದ ಚೀಲಗಳ ನಡುವೆ ಮರೆಮಾಡಿದ್ದ 50 ಕೆ.ಜಿ ತೂಕದ ಒಟ್ಟು 192 ಅಕ್ಕಿ ಚೀಲಗಳು ಪತ್ತೆಯಾಗಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 3,07,200 ರೂ. ಆಗಿದೆ. ಇವುಗಳನ್ನು ಅಧಿಕಾರಿಗಳು ಪತ್ತೆಹಚ್ಚಿ ಪಂಚನಾಮೆ ಮೂಲಕ ಜಪ್ತಿ ಮಾಡಿದ್ದಾರೆ.

ಆರೋಪಿಗಳು ಯಾರು? : ಈ ಪ್ರಕರಣದಲ್ಲಿ ರಾಜೇಶ್ ಎಸ್. ಶೆಟ್ಟಿ, ಪ್ರತೀಕ್ ರಾಜೇಶ್ ಶೆಟ್ಟಿ, ವಾಹನ ಮಾಲೀಕ ಹರೀಶ ಪಟಗಾರ, ಚಾಲಕ ನಾರಾಯಣ ಶಂಕರ ಸಾಳಸ್ಕರ ಹಾಗೂ ಹಮಾಲಿ ಜಗದೀಶ ಸುರೇಶ್ ಆಗೇರರನ್ನು ಆರೋಪಿಗಳಾಗಿ ಗುರುತಿಸಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅಕ್ರಮ ಅಕ್ಕಿ ಸಾಗಾಟದ ಹಿನ್ನಲೆ ಮತ್ತು ಇದರ ಹಿಂದೆ ಇರುವ ಜಾಲದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಪಡಿತರ ಅಕ್ಕಿಯನ್ನು ಬಡವರಿಗೆ ನೀಡಬೇಕಾದ ಸರ್ಕಾರಿ ಯೋಜನೆಗೆ ಮೀಸಲಾಗಿದ್ದು, ಅದನ್ನು ಅಕ್ರಮವಾಗಿ ಮಾರಾಟ ಅಥವಾ ಸಾಗಾಟ ಮಾಡುವುದು ಗಂಭೀರ ಅಪರಾಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.