ಕುಂಬಾರವಾಡದ ಕಾಟೇಲ್ ಗ್ರಾಮದಲ್ಲಿ ಬರ್ಡಿಂಗ್ ಟ್ರೇಲ್ ಆಯೋಜನೆ – 45 ಜಾತಿಯ ಪಕ್ಷಿಗಳ ವೀಕ್ಷಣೆ
ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಜೋಯಡಾ ತಾಲೂಕಿನ ಕುಂಬಾರವಾಡದ ಕಾಟೇಲ್ ಗ್ರಾಮದಲ್ಲಿ ಸಂಜೀವಿನಿ ಸೇವಾ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ವಿಶೇಷ ಪಕ್ಷಿವೀಕ್ಷಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವ ಸಂಜೀವಿನಿ ಟ್ರಸ್ಟ್, ವಿದ್ಯಾರ್ಥಿಗಳಿಗೆ ಪ್ರಕೃತಿ ಮತ್ತು ಪಕ್ಷಿಜೀವನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಈ ವರ್ಷದ ಪಕ್ಷಿವೀಕ್ಷಣೆ ಕಾರ್ಯಕ್ರಮದಲ್ಲಿ ಬಿ.ಜಿ.ವಿ.ಎಸ್. ಕಾಲೇಜು, ಮೋರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಸೇರಿದಂತೆ ಒಟ್ಟು 75 ಜನ ಭಾಗವಹಿಸಿದ್ದರು. ಪಾಲ್ಗೊಂಡವರು ಜೋಯಡಾ ಅರಣ್ಯ ಪ್ರದೇಶದಲ್ಲಿ ಸುಮಾರು 45 ಜಾತಿಯ ವಿವಿಧ ಪಕ್ಷಿಗಳ ಚಲನವಲನ, ಆಹಾರ ಕ್ರಮ ಹಾಗೂ ವಾಸಸ್ಥಳಗಳನ್ನು ನೇರವಾಗಿ ವೀಕ್ಷಿಸಿದರು.
ಇದನ್ನೂ ಓದಿ: ಹೊಸ ವರ್ಷ ಆಚರಣೆ ಸೂಚನೆ ಪಾಲಿಸಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
“ಜೋಯಡಾ ಕಾಡುಗಳಲ್ಲಿ ಇದುವರೆಗೆ 350ಕ್ಕೂ ಹೆಚ್ಚು ಜಾತಿಯ ಪಕ್ಷಿಗಳನ್ನು ಗುರುತಿಸಲಾಗಿದೆ. ಜಲಕ್ರೀಡೆಯೊಂದಿಗೆ ಪಕ್ಷಿವೀಕ್ಷಣೆಯು ಪ್ರವಾಸೋದ್ಯಮಕ್ಕೆ ಮತ್ತೊಂದು ಆಯಾಮ ನೀಡಲಿದೆ. ಮುಂದಿನ ದಿನಗಳಲ್ಲಿ ಜೋಯಡಾ ಪ್ರದೇಶವು ಅಂತಾರಾಷ್ಟ್ರೀಯ ಮಟ್ಟದ ಪಕ್ಷಿವೀಕ್ಷಣಾ ತಾಣವಾಗಿ ರೂಪುಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ” ಎಂದು ಹಿರಿಯ ಪತ್ರಕರ್ತ ಪ್ರಕಾಶ ಶೇಟ್ ಹೇಳಿದರು.
ಸಂಜೀವಿನಿ ಟ್ರಸ್ಟ್‌ನ ಪ್ರಮುಖರಾದ ರವಿ ರೇಡ್ಕರ್ ಮಾತನಾಡಿ, ಮಾನವ ಮತ್ತು ಪಕ್ಷಿಗಳ ನಡುವಿನ ಅವಿನಾಭಾವ ಸಂಬಂಧಗಳ ಕುರಿತು ವಿವರಿಸಿದರು. ಪರಿಸರ ಸಂರಕ್ಷಣೆಯಲ್ಲಿ ಪಕ್ಷಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಪಕ್ಷಿವೀಕ್ಷಣೆ ಮೂಲಕ ಪ್ರಕೃತಿಯೊಂದಿಗೆ ಒಡನಾಟ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಹೊಸ ವರ್ಷಾಚರಣೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಗಿ ಭದ್ರತೆ
ಕಾರ್ಯಕ್ರಮದಲ್ಲಿ ಕಾಳಿ ಬ್ರಿಗೇಡ್‌ನ ಸಲೀಂ ಮುಜಾವರ, ಪ್ರವಾಸೋದ್ಯಮ ಸಂಘದ ವಿನಯ ದೇಸಾಯಿ, ಕೈಗಾ ಬರ್ಡರ್ಸ್ ತಂಡದ ಹರೀಶ, ಪ್ರಶಾಂತ, ಸಂಪತ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಪಕ್ಷಿಗಳ ಪರಿಚಯ ಹಾಗೂ ಮಾರ್ಗದರ್ಶನ ನೀಡಿದರು.
ಈ ಪಕ್ಷಿವೀಕ್ಷಣೆ ಕಾರ್ಯಕ್ರಮವನ್ನು ಸಂಜೀವಿನಿ ಸೇವಾ ಟ್ರಸ್ಟ್ ಮತ್ತು ಕೈಗಾ ಬರ್ಡರ್ಸ್ ತಂಡ ಸಂಯುಕ್ತವಾಗಿ ಸಂಯೋಜಿಸಿತ್ತು. ವಿದ್ಯಾರ್ಥಿಗಳು ಕಾರ್ಯಕ್ರಮದಿಂದ ಅಪಾರ ಜ್ಞಾನ ಹಾಗೂ ಅನುಭವ ಪಡೆದು ಸಂತಸ ವ್ಯಕ್ತಪಡಿಸಿದರು.























