ದಾಂಡೇಲಿ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಗೋಕರ್ಣ ಹಾಲಕ್ಕಿ ಹೆರಿಟೇಜ್ ವಾಕ್ ಎಂಬ ವಿಶಿಷ್ಠ ಸಮುದಾಯ ಆಧಾರಿತ ಪ್ರವಾಸೋದ್ಯಮ ಯೋಜನೆ ಪ್ರಾರಂಭಿಸಲಾಗಿದೆ. ಈ ವಿನೂತನ ಪ್ರಯತ್ನ ಹಾಲಕ್ಕಿ ಒಕ್ಕಲಿಗ ಸಮೂದಾಯದ ವಿಶಿಷ್ಠ ಸಂಸ್ಕೃತಿ, ಪರಂಪರೆ ಹಾಗೂ ಜೀವನ ಶೈಲಿಯನ್ನು ಸಮರ್ಪಕವಾಗಿ ಆಸ್ವಾದಿಸಲು ಒಂದು ಸುವರ್ಣಾವಕಾಶವಾಗಿದೆ. ಅಷ್ಟೇ ಅಲ್ಲದೆ ಮಹಿಳಾ ಸಬಲೀಕರಣಕ್ಕೂ ಮುಖ್ಯ ವೇದಿಕೆಯಾಗಿದೆ.
ಇಂದು (ಶುಕ್ರವಾರ) ತಮಿಳುನಾಡಿನ ಕೊಯಮತ್ತೂರು ಕಾಲೇಜಿನಿಂದ ಆಗಮಿಸಿರುವ ವಿದ್ಯಾರ್ಥಿಗಳ ತಂಡ ಹಾಲಕ್ಕಿ ಗ್ರಾಮಕ್ಕೆ ಶೈಕ್ಷಣಿಕ – ಅನುಭವಾತ್ಮಕ ಭೇಟಿ ನೀಡಿದ್ದಾರೆ. ಇದೊಂದು ಹೆಮ್ಮೆಯ ಸಂಗತಿಯಾಗಿದೆ. ಈ ಕಾರ್ಯಕ್ರಮ ಗ್ರಾಮ ಅಭಿವೃದ್ಧಿ ಯ ಮಾರ್ಗದಲ್ಲಿ ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವದರ ಜೊತೆಗೆ ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಸ್ವಾವಲಂಭನೆಯನ್ನು ಹೆಚ್ಚಿಸುತ್ತದೆ. ಗ್ರಾಮೀಣ ಜೀವನೋಪಾಯ, ಸಾಂಸ್ಕೃತಿಕ ಹೆಮ್ಮೆ ಮತ್ತು ಹಾಲಕ್ಕಿ ಪರಂಪರೆಯ ಸಂರಕ್ಷಣೆಗೆ ಇದೊಂದು ಮೌಲ್ಯಭರಿತ ಹೆಜ್ಜೆಯಾಗಿದೆ ಎನ್ನಲಾಗಿದೆ.