ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಜೋಯಡಾ ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗವೇಗಾಳಿ ಗ್ರಾಮದ ಗ್ರಾಮಸ್ಥರು ಶಬ್ದ ಮಾಲಿನ್ಯದಿಂದ ತೀವ್ರವಾಗಿ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಇದೇ ಪ್ರಥಮ ಬಾರಿಗೆ ಧಾರವಾಡದ ಕರ್ನಾಟಕ ಹೈಕೋರ್ಟ್ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಅರ್ಜಿದಾರರ ಮನವಿಯನ್ನು ಪರಿಗಣಿಸಿ 12 ವಾರಗಳೊಳಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ.
ಗವೇಗಾಳಿ ಗ್ರಾಮದ ನಿವಾಸಿಗಳು ಸಲ್ಲಿಸಿದ ಈ ರಿಟ್ ಅರ್ಜಿ (WP No. 106569/2025) ಯಲ್ಲಿ ರಾಜ್ಯ ಸರ್ಕಾರ, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ತಹಶೀಲ್ದಾರ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಸಂಬಂಧಪಟ್ಟ ಹಲವು ಇಲಾಖಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಇದನ್ನೂ ಓದಿ: ಜಿಪಿಎಸ್ ಟ್ರ್ಯಾಕರ್ ಹೊಂದಿದ್ದ ಹ್ಯೂಗ್ಲಿನ್ ಸೀಗಲ್ ಹಕ್ಕಿ ಸಾವು
ಗ್ರಾಮಸ್ಥರ ಅಳಲು ಏನು?: ಗವೇಗಾಳಿ ಗ್ರಾಮದಲ್ಲಿ ಸಾವಿರಕ್ಕೂ ಅಧಿಕ ಜನಸಂಖ್ಯೆ ವಾಸವಿದ್ದು, ಗ್ರಾಮ ಸುತ್ತಮುತ್ತ 2ರಿಂದ 3 ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 30ರಿಂದ 40 ಹೋಂಸ್ಟೆಗಳು ನಿರ್ಮಾಣಗೊಂಡಿವೆ. ಹೊರಗಿನಿಂದ ಬಂದ ಕೆಲವರು ಕೇವಲ ಲಾಭದ ದೃಷ್ಟಿಯಿಂದ ಭೂಮಿಯನ್ನು ಖರೀದಿಸಿ ಹೋಂಸ್ಟೆಗಳನ್ನು ನಿರ್ಮಿಸಿ ಪ್ರವಾಸೋದ್ಯಮ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಹೋಂಸ್ಟೆಗಳಲ್ಲಿ ಡಿ.ಜೆ. ಶಬ್ದ ಮಿತಿಮೀರಿಸುವುದು, ರಾತ್ರಿಯ ವೇಳೆ ಪ್ರವಾಸಿಗರ ಕೂಗಾಟ–ಅರಚಾಟ, ಪಟಾಕಿ ಸಿಡಿಸುವುದು ನಿತ್ಯದ ಕಾಟವಾಗಿದ್ದು, ಇದರಿಂದ ಗ್ರಾಮಸ್ಥರ ಸಾಮಾನ್ಯ ಜೀವನವೇ ಅಸ್ತವ್ಯಸ್ತವಾಗಿದೆ ಎಂದು ದೂರಿದ್ದಾರೆ. ಮಕ್ಕಳ ಶಾಲಾ ಕಲಿಕೆಯ ಸಮಯದಲ್ಲಿಯೂ ಶಬ್ದ ಮಾಲಿನ್ಯದಿಂದ ಅಡೆತಡೆ ಉಂಟಾಗುತ್ತಿದೆ ಎಂಬುದು ಗ್ರಾಮಸ್ಥರ ಗಂಭೀರ ಆರೋಪ.
ಇದನ್ನೂ ಓದಿ: ವಿಜೃಂಭಣೆಯ ಕರಾವಳಿ ಉತ್ಸವ–2025 ಆಚರಣೆಗೆ ಸಕಲ ಸಿದ್ಧತೆ
ವನ್ಯಜೀವಿಗಳಿಗೂ ಅಡ್ಡಿ, ಬೆಳೆ ಹಾನಿ: ಅತಿಯಾದ ಶಬ್ದದಿಂದ ವನ್ಯಜೀವಿಗಳ ಸಂಚಲನಕ್ಕೂ ಅಡೆತಡೆಯಾಗಿದ್ದು, ಕಾಡುಪ್ರಾಣಿಗಳು ಗ್ರಾಮಗಳತ್ತ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಕೆಲ ಸಂದರ್ಭಗಳಲ್ಲಿ ಮನುಷ್ಯರ ಮೇಲೂ ದಾಳಿ ನಡೆದಿರುವ ಘಟನೆಗಳು ವರದಿಯಾಗಿವೆ. ಈ ಸಮಸ್ಯೆಗಳ ಕುರಿತು ಪ್ರಶ್ನಿಸಿದ ಗ್ರಾಮಸ್ಥರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅರ್ಜಿದಾರರು ಹೈಕೋರ್ಟ್‌ಗೆ ತಿಳಿಸಿದ್ದಾರೆ.
ದೂರು ನೀಡಿದರೂ ಪ್ರಯೋಜನವಾಗಲಿಲ್ಲ: ಈ ಸಂಬಂಧ ಗ್ರಾಮ ಪಂಚಾಯತ್, ತಹಶೀಲ್ದಾರ್, ಅರಣ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಅನಿವಾರ್ಯವಾಗಿ ಹೈಕೋರ್ಟ್ ಮೊರೆ ಹೋಗಬೇಕಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಹೈಕೋರ್ಟ್, ಅರ್ಜಿದಾರರ ಮನವಿಯನ್ನು ಪರಿಶೀಲಿಸಿ ಕಾನೂನುಬದ್ಧವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದು, ಗ್ರಾಮಸ್ಥರಲ್ಲಿ ನ್ಯಾಯ ಸಿಗುವ ನಿರೀಕ್ಷೆ ಮೂಡಿಸಿದೆ.









