ಉತ್ತರ ಕನ್ನಡ(ದಾಂಡೇಲಿ): ಸಾರ್ವಜನಿಕರು ತಮ್ಮ ದೈನಂದಿನ ಬದುಕಿನಲ್ಲಿ ಪ್ರತಿದಿನವೂ ಅನೇಕ ಒತ್ತಡದ ಕೆಲಸಗಳಲ್ಲಿ ತೊಡಗುತ್ತಿದ್ದು, ಕರಾವಳಿ ಉತ್ಸವದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಾರ್ವಜನಿಕರು ತಮ್ಮ ದಿನ ನಿತ್ಯದ ಬದುಕಿನ ಜಂಜಾಟಗಳಿಂದ ನೆಮ್ಮದಿ ಪಡೆದುಕೊಳ್ಳಲು ಸಾಧ್ಯ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಕರಾವಳಿ ಉತ್ಸವ – 2025ರ ಅಂಗವಾಗಿ ಆಯೋಜಿಸಲಾದ ಮರುಳು ಶಿಲ್ಪಾ ರಚನೆ ಮತ್ತು ಗಾಳಿಪಟ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾನು 1986 ರಿಂದ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದು, ಜಿಲ್ಲಾಡಳಿತದ ವತಿಯಿಂದ ಪ್ರತಿ ಬಾರಿಯೂ ಕರಾವಳಿ ಉತ್ಸವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗುತ್ತದೆ. ಇಲ್ಲಿನ ಜನರು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೆ. ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡಲಾಗುವುದು ಎಂದರು.
ಇದನ್ನೂ ಓದಿ: ಚಿತ್ರದುರ್ಗ ಬಸ್ ದುರಂತದ ಬಳಿಕ ರಶ್ಮಿ ನಾಪತ್ತೆ
ಕಾರವಾರದಲ್ಲಿ ಕರಾವಳಿ ಉತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಈ ಕಾರ್ಯದಲ್ಲಿ ಎಲ್ಲಾ ಅಧಿಕಾರಿಗಳು ಸಿಬ್ಬಂದಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು, ತಮ್ಮ ಮನೆ ಉತ್ಸವದ ರೀತಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಅಯೋಜಿಸುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಉತ್ಸವದಲ್ಲಿ ಭಾಗವಹಿಸಬೇಕು ಮತ್ತು ಈ ಉತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಗಾಳಿಪಟ ಉತ್ಸವದಲ್ಲಿ ಭಾಗವಹಿಸಿದ್ದ ನೂರಾರು ಸಾರ್ವಜನಿಕರು ವಿವಿಧ ರೀತಿಯ ವೈವಿಧ್ಯಮಯ ಗಾಳಿಪಟಗಳನ್ನು ಹಾರಿಸುವುದರ ಮೂಲಕ ಸಮುದ್ರ ತೀರದ ಬಾನಿನಲ್ಲಿ ಆಕರ್ಷಕ ಚಿತ್ತಾರ ಬಿಡಿಸಿದರು. ಮಕ್ಕಳು ಗಾಳಿಪಟಗಳನ್ನು ಹಾರಿಸಿ ಸಂಭ್ರಮಿಸಿದರು. ಉಡುಪಿಯ ರಾಘವೇಂದ್ರ ಮತ್ತು ತಂಡದವರು ಸಮುದ್ರತೀರದಲ್ಲಿ ಮರಳಿನಿಂದ ರಚಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಕಲೆ ಸಂಸ್ಕೃತಿ ಬಿಂಬಿಸುವ ಆಕರ್ಷಕ ಮರಳು ಶಿಲ್ಪ ನೆರದಿದ್ದ ಸಾರ್ವಜನಿಕರನ್ನು ಆಕರ್ಷಿಸಿತು.






















