ಆನೆ ದಾಳಿಯಿಂದ ಅಡಿಕೆ ತೋಟ–ಭತ್ತದ ಗದ್ದೆಗಳಿಗೆ ಭಾರೀ ನಷ್ಟ, ರೈತರಲ್ಲಿ ಆತಂಕ
ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಅವುರ್ಲಿ ಗ್ರಾಮ ಹಾಗೂ ಗಣೇಶಗುಡಿ ಭಾಗದಲ್ಲಿ ಹೆಣ್ಣಾನೆಯೊಂದು ತೋಟಗಳಿಗೆ ಲಗ್ಗೆ ಇಟ್ಟ ಘಟನೆ ರೈತರಲ್ಲಿ ಆತಂಕ ಮೂಡಿಸಿದೆ. ಆಹಾರ ಹುಡುಕಿಕೊಂಡು ಬಂದ ಆನೆ, ವಿಶೇಷವಾಗಿ ಬಾಳೆ ಗೊನೆಗಳತ್ತ ಆಕರ್ಷಿತವಾಗಿ ತೋಟಗಳಿಗೆ ನುಗ್ಗಿದ್ದು, ಪರಿಣಾಮವಾಗಿ ಅಡಿಕೆ ತೋಟಗಳು ಹಾಗೂ ಭತ್ತದ ಗದ್ದೆಗಳು ಗಂಭೀರವಾಗಿ ಹಾನಿಗೊಳಗಾಗಿವೆ.
ಈರುಳಿನಲ್ಲಿ ತೋಟಗಳಿಗೆ ನುಗ್ಗಿದ ಹೆಣ್ಣಾನೆ, ಭತ್ತದ ಗದ್ದೆಗಳನ್ನು ತುಳಿದು ನಾಶಪಡಿಸಿದ್ದು, ಬಾಳೆ ತೋಟಗಳಲ್ಲಿ ಬೆಳೆದಿದ್ದ ಗೊನೆಗಳನ್ನು ಕಿತ್ತು ತಿಂದಿದೆ. ಇದರಿಂದಾಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಬಡ ಮಕ್ಕಳ ಶಿಕ್ಷಣಕ್ಕೆ ಕತ್ತರಿ: ಸರಕಾರ ನೀತಿ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಆನೆ ತೋಟಗಳಿಗೆ ನುಗ್ಗಿದ ವಿಷಯ ತಿಳಿದ ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ದಾಂಡೇಲಿ ಹಾಗೂ ಪಣಸೊಲಿ ಅರಣ್ಯ ಭಾಗದಿಂದ ಆನೆ ಓಡಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಜೋಯಿಡಾ ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಇಂತಹ ಆನೆಗಳ ದಾಳಿ ಸಾಮಾನ್ಯವಾಗಿದ್ದು, ಪ್ರತಿ ವರ್ಷವೂ ರೈತರು ಬೆಳೆ ನಷ್ಟವನ್ನು ಅನುಭವಿಸುತ್ತಿದ್ದಾರೆ. ಬಾಳೆ, ಅಡಿಕೆ ಮತ್ತು ಭತ್ತದ ಬೆಳೆಗಳು ಆನೆಗಳಿಗೆ ಸುಲಭ ಆಹಾರವಾಗಿರುವುದರಿಂದ, ಗ್ರಾಮಗಳತ್ತ ಆನೆಗಳು ನಿರಂತರವಾಗಿ ಬರುತ್ತಿವೆ ಎನ್ನಲಾಗಿದೆ.
ಇದನ್ನೂ ಓದಿ: ಅಮದಳ್ಳಿಯಲ್ಲಿ ಅಗ್ನಿ ಅವಘಡ : ಎರಡು ಕಾರ್ , ಆಟೋ ಭಸ್ಮ
ಈ ಹಿನ್ನೆಲೆಯಲ್ಲಿ, ನಷ್ಟ ಅನುಭವಿಸಿದ ರೈತರು ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಮುಂದಿನ ದಿನಗಳಲ್ಲಿ ಆನೆಗಳ ಹಾವಳಿಯನ್ನು ನಿಯಂತ್ರಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಗ್ರಾಮಸ್ಥರ ಸುರಕ್ಷತೆ ಹಾಗೂ ಬೆಳೆ ರಕ್ಷಣೆಗೆ ಬೇಲಿ ವ್ಯವಸ್ಥೆ ಮತ್ತು ಎಚ್ಚರಿಕಾ ಕ್ರಮಗಳನ್ನು ಬಲಪಡಿಸುವಂತೆ ಒತ್ತಾಯಿಸಲಾಗಿದೆ.























