ಬೆಂಗಳೂರು: ರಾಜ್ಯದ ಶೈಕ್ಷಣಿಕ ವಲಯದಲ್ಲಿ ಕುತೂಹಲ ಕೆರಳಿಸಿರುವ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಇಂದು (ಏಪ್ರಿಲ್ 9, ಗುರುವಾರ) ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಈಗಾಗಲೇ ಸಿದ್ಧತೆ ಪೂರ್ಣಗೊಳಿಸಿದ್ದು, ಈ ಬಾರಿಯೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ತಮ್ಮ ಅಗ್ರಸ್ಥಾನವನ್ನು ಕಾಯ್ದುಕೊಳ್ಳಲಿವೆಯೇ ಎಂಬ ಚರ್ಚೆ ಶುರುವಾಗದೆ.
ಹಾಗೇ ಕಳೆದ ಹಲವು ವರ್ಷಗಳಿಂದ ರಾಜ್ಯದ ಶೈಕ್ಷಣಿಕ ಭೂಪಟದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಮೊದಲ ಎರಡು ಸ್ಥಾನಗಳನ್ನು ಹಂಚಿಕೊಳ್ಳುತ್ತಾ ಬಂದಿವೆ. ಈ ಬಾರಿಯೂ ಈ ಜಿಲ್ಲೆಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. 2025ರಲ್ಲಿ ಉಡುಪಿ ಶೇ. 93.90 ಹಾಗೂ ದಕ್ಷಿಣ ಕನ್ನಡ ಶೇ. 93.57 ಫಲಿತಾಂಶ ಪಡೆದಿದ್ದವು. 2024ರಲ್ಲಿ ಈ ಪ್ರಮಾಣ ಶೇ. 97ರ ಗಡಿಯಲ್ಲಿದ್ದ ಕಾರಣ, ಈ ಬಾರಿಯ ಶೇಕಡಾವಾರು ಏರಿಳಿತದ ಮೇಲೆ ಎಲ್ಲರ ಕಣ್ಣಿದೆ ಎನ್ನಲಾಗುತ್ತಿದೆ.
ಡಿಜಿ ಲಾಕರ್ ಹಾಗೂ ಬದಲಾವಣೆಗಳು: ಈ ಬಾರಿ ಮಂಡಳಿಯು ಅಂಕಪಟ್ಟಿಗಳನ್ನು ಡಿಜಿ ಲಾಕರ್ (DigiLocker) ಮೂಲಕ ನೀಡುವ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. “ಈ ಪ್ರಕ್ರಿಯೆಯಿಂದಾಗಿ ಫಲಿತಾಂಶ ಪ್ರಕಟಣೆಯಲ್ಲಿ ಸ್ವಲ್ಪ ವಿಳಂಬವಾಗಿದೆ, ಆದ್ರೆ ಮುಂದಿನ ದಿನಗಳಲ್ಲಿ ಇದು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ನೀಡಲಿದೆ” ಎಂದು ಮಂಡಳಿಯ ಅಧ್ಯಕ್ಷ ಪ್ರಕಾಶ್ ಜಿ. ನಿಟ್ಟಾಲಿ ತಿಳಿಸಿದ್ದಾರೆ. ವಿಶೇಷವೆಂದರೆ ಕಾಲೇಜುಗಳು ಮತ್ತು ವಿದ್ಯಾರ್ಥಿಗಳಿಗೆ ಒಂದೇ ಸಮಯದಲ್ಲಿ ಫಲಿತಾಂಶ ಲಭ್ಯವಾಗಲಿದೆ.
ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ಕರೆ: ಫಲಿತಾಂಶದ ಸಮಯದ ಮಾನಸಿಕ ಒತ್ತಡದ ಕುರಿತು ಮನೋವೈದ್ಯ ಡಾ. ಕಿರಣ್ ಕುಮಾರ್ ಪಿ.ಕೆ ಸಲಹೆ ನೀಡಿದ್ದಾರೆ. “ಅಂಕಗಳು ಕಡಿಮೆಯಾದರೆ ಕುಗ್ಗುವ ಅಗತ್ಯವಿಲ್ಲ. ಇಲಾಖೆಯು ಅಂಕ ಸುಧಾರಣೆಗೆ ಮತ್ತೊಂದು ಪರೀಕ್ಷೆಯ ಅವಕಾಶ ನೀಡಿರುವುದು ವಿದ್ಯಾರ್ಥಿಗಳಿಗೆ ವರದಾನವಾಗಿದೆ” ಎಂದಿದ್ದಾರೆ.
ಒಟ್ಟಾರೆಯಾಗಿ, ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳು ಈ ಬಾರಿ ರಾಜ್ಯದ ಒಟ್ಟಾರೆ ತೇರ್ಗಡೆ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಮಧ್ಯಾಹ್ನ 3 ಗಂಟೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಹಾದಿ ನಿರ್ಧಾರವಾಗಲಿದೆ.























