Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ನಗರೋತ್ಥಾನ ಯೋಜನೆಗೆ ವೇಗ: ದಾಂಡೇಲಿ ಸಮಗ್ರ ಅಭಿವೃದ್ಧಿಗೆ ₹30 ಕೋಟಿ

ನಗರೋತ್ಥಾನ ಯೋಜನೆಗೆ ವೇಗ: ದಾಂಡೇಲಿ ಸಮಗ್ರ ಅಭಿವೃದ್ಧಿಗೆ ₹30 ಕೋಟಿ

0
58

ನಗರೋತ್ಥಾನ–3 ಯೋಜನೆ: ದಾಂಡೇಲಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ದಾಂಡೇಲಿ (ಉತ್ತರ ಕನ್ನಡ): ಆರ್.ವಿ.ದೇಶಪಾಂಡೆ ಅವರು ದಾಂಡೇಲಿ ನಗರವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಕೈಗೊಂಡಿರುವ ಪ್ರಯತ್ನಗಳ ಬಗ್ಗೆ ವಿವರಿಸಿ, ನಗರೋತ್ಥಾನ ಯೋಜನೆಯಡಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲಾಗುತ್ತಿದೆ ಎಂದು ಹೇಳಿದರು.

ದಾಂಡೇಲಿ ನಗರಸಭೆಯ ಆವರಣದಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ನಗರೋತ್ಥಾನ–3 ಯೋಜನೆಯಡಿ ₹6.7 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ದಾಂಡೇಲಿ ಒಂದು ಸಂಪದ್ಭರಿತ ನಗರವಾಗಿದ್ದು, ಇಲ್ಲಿ ಎರಡು ಪ್ರಮುಖ ಕೈಗಾರಿಕೆಗಳು ಮುಚ್ಚಿದ ಸಂದರ್ಭದಲ್ಲಿ ನಗರ ಅಭಿವೃದ್ಧಿಗೆ ಹೊಸ ಮಾರ್ಗ ಹುಡುಕಬೇಕಾದ ಪರಿಸ್ಥಿತಿ ಎದುರಾದದ್ದು ನೆನಪಿಸಿಕೊಂಡರು.

“ಆ ಸಮಯದಲ್ಲಿ ಶಾಸಕನಾಗಿ ನಾನು ಯೋಚಿಸಿ ತೆಗೆದುಕೊಂಡ ನಿರ್ಧಾರವೇ ಪ್ರವಾಸೋದ್ಯಮ ಅಭಿವೃದ್ಧಿ. ಇಂದು ಪ್ರವಾಸೋದ್ಯಮ ದಾಂಡೇಲಿಗೆ ಹೊಸ ಗುರುತು ಮತ್ತು ಮಹತ್ವ ತಂದುಕೊಟ್ಟಿದೆ” ಎಂದು ಹೇಳಿದರು.

₹30 ಕೋಟಿ ವೆಚ್ಚದಲ್ಲಿ ಹಂತ ಹಂತವಾಗಿ ಅಭಿವೃದ್ಧಿ : ನಗರೋತ್ಥಾನ ಯೋಜನೆಯಡಿ ದಾಂಡೇಲಿ ನಗರದ ಸಮಗ್ರ ಅಭಿವೃದ್ಧಿಗೆ ಸುಮಾರು ₹30 ಕೋಟಿ ವೆಚ್ಚದಲ್ಲಿ ವಿವಿಧ ಮೂಲಸೌಕರ್ಯ ಕಾಮಗಾರಿಗಳು ಕೈಗೊಳ್ಳಲಾಗುತ್ತಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ.

ಈ ಯೋಜನೆಯಡಿ ಕೈಗೊಳ್ಳಲಾಗುವ ಪ್ರಮುಖ ಕಾಮಗಾರಿಗಳು: ನಗರ ರಸ್ತೆ ಸುಧಾರಣೆ, ಒಳಚರಂಡಿ ವ್ಯವಸ್ಥೆಯ ಅಭಿವೃದ್ಧಿ, ನಗರ ಸೌಂದರೀಕರಣಕ್ಕಾಗಿ ಬೀದಿ ದೀಪಗಳ ಅಳವಡಿಕೆ, ಕುಡಿಯುವ ನೀರಿನ ಪೂರೈಕೆ ಸುಧಾರಣೆ, ಉದ್ಯಾನವನಗಳ ನಿರ್ಮಾಣ, ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸೋದ್ಯಮದ ದೃಷ್ಟಿಯಿಂದ ನಗರದಲ್ಲಿ ಅಗತ್ಯ ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ಕೈಗಾರಿಕೆ ಮತ್ತು ಕಾರ್ಮಿಕರ ಸಹಕಾರ ಅಗತ್ಯ: ದಾಂಡೇಲಿಯಲ್ಲಿರುವ ಏಕೈಕ ಪ್ರಮುಖ ಕೈಗಾರಿಕೆಯಾದ West Coast Paper Mills ಸಂಸ್ಥೆಯು ಸಿಎಸ್‌ಆರ್ (CSR) ಯೋಜನೆಯಡಿ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುತ್ತಿದೆ ಎಂದು ದೇಶಪಾಂಡೆ ಹೇಳಿದರು. ಕಾರ್ಮಿಕರು ಧರಣಿ ಮತ್ತು ಮುಷ್ಕರಗಳನ್ನು ತಗ್ಗಿಸಿ, ಉತ್ಪಾದನೆ ಹೆಚ್ಚಿಸುವ ಮೂಲಕ ಕೈಗಾರಿಕೆಯನ್ನು ಉಳಿಸಿಕೊಳ್ಳಬೇಕು. ಇದರಿಂದ ಕಾರ್ಮಿಕರು ಹಾಗೂ ಸ್ಥಳೀಯ ಜನರಿಗೆ ಲಾಭವಾಗಲಿದೆ ಎಂದು ಅವರು ತಿಳಿಸಿದರು.

ಶಾಸಕ ಕೊಡುಗೆ ಶ್ಲಾಘಿಸಿದ ಪೇಪರ್ ಮಿಲ್ ಆಡಳಿತ: ಕಾರ್ಯಕ್ರಮದಲ್ಲಿ ಮಾತನಾಡಿದ ರಾಜೇಂದ್ರ ಜೈನ ಅವರು, “ದಾಂಡೇಲಿಯಂತಗ ಚಿಕ್ಕ ನಗರಕ್ಕೆ ಶಾಸಕ ಆರ್.ವಿ. ದೇಶಪಾಂಡೆ ನೀಡಿರುವ ಕೊಡುಗೆ ಮಹತ್ವದದ್ದು” ಎಂದು ಶ್ಲಾಘಿಸಿದರು.

ಪೌರಾಯುಕ್ತ ವಿವೇಕ್ ಬನ್ನೆ ಪ್ರಾಸ್ತಾವಿಕವಾಗಿ ಮಾತನಾಡಿ, ನಗರದಲ್ಲಿ ಈಗಾಗಲೇ ನಡೆದಿರುವ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಿಯಾಜ್ ಬಾಬು ಸಯ್ಯದ್. ತಹಶೀಲ್ದಾರ್ ಶೈಲೇಶ್ ಪರಮಾನಂದ, ತಾಪಂ ಇಒ ಟಿ.ಸಿ. ಹಾದಿಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಸಹಿತ ಹಲವರು ಉಪಸ್ಥಿತರಿದ್ದರು.