ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ದಾಳಿ ತೀವ್ರಗೊಂಡಿದ್ದು, ಸಾರ್ವಜನಿಕರ ದೈನಂದಿನ ಜೀವನಕ್ಕೆ ಭಾರೀ ಆತಂಕ ಉಂಟಾಗಿದೆ. ವಿಶೇಷವಾಗಿ ಬೆಳಗಿನ ಜಾವ ಪತ್ರಿಕಾ ವಿತರಕರು, ಹಾಲು ವಿತರಕರು, ಶಾಲಾ ಮಕ್ಕಳು, ವೃದ್ಧರು ಹಾಗೂ ದ್ವಿಚಕ್ರ ವಾಹನ ಸವಾರರ ಮೇಲೆ ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿ ಕಚ್ಚುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ.
ಇಂದು ಬೆಳಿಗ್ಗೆ ಗಣೇಶ ನಗರ ಪ್ರದೇಶದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಮನೆ ಮನೆಗೆ ವಿತರಿಸಿಕೊಂಡು ಬೈಕ್‌ನಲ್ಲಿ ತೆರಳುತ್ತಿದ್ದ ರವಿಕಾಳೆಯವರನ್ನ ಬೀದಿ ನಾಯಿಯೊಂದು ಬೆನ್ನತ್ತಿ ಜಿಗಿದು ಕಚ್ಚಿ ಕೆಡವಿದ ಘಟನೆ ನಡೆದಿದೆ. ಘಟನೆಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ನಿವಾಸಿಗಳು ತಕ್ಷಣ ಧಾವಿಸಿ ಅವರನ್ನು ರಕ್ಷಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು.
ಇದನ್ನೂ ಓದಿ: ಬೆಳಗಾವಿ: ಸಿಗರೇಟ್ ವಿಚಾರಕ್ಕೆ ಅಂಗಡಿ ಮಾಲೀಕನ ಹತ್ಯೆ
ಈ ಪ್ರದೇಶದಲ್ಲಿ ಬೀದಿ ನಾಯಿಗಳ ಗುಂಪೊಂದು ಸಕ್ರಿಯವಾಗಿದ್ದು, ವೃದ್ಧರು ಮತ್ತು ಮಕ್ಕಳ ಮೇಲೆ ಸಹ ದಾಳಿ ನಡೆಸುತ್ತಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹಲವು ಬಾರಿ ನಗರಸಭೆಯ ಗಮನಕ್ಕೆ ತಂದರೂ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆ ನಗರಸಭೆಯ ವತಿಯಿಂದ ಬೀದಿ ನಾಯಿಗಳನ್ನು ಹಿಡಿದು ವಾಹನದಲ್ಲಿ ಸಾಗಿಸಿ ನಿಯಂತ್ರಿಸುವ ಕಾರ್ಯ ನಡೆಯುತ್ತಿತ್ತು. ಆದರೆ ಅದು ಅಚಾನಕ್ ಸ್ಥಗಿತಗೊಂಡಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಸಂತಾನ ಹರಣ ಚಿಕಿತ್ಸೆ (ABC) ಕೊರತೆ, ನಿರ್ಲಕ್ಷ ಹಾಗೂ ಆಹಾರದ ಕೊರತೆ ಬೀದಿ ನಾಯಿಗಳನ್ನು ಆಕ್ರಮಣಕಾರಿಯಾಗಿಸುವ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕೇರಳದ ಪ್ರವಾಸಿ ವಿದ್ಯಾರ್ಥಿಗಳಿಂದ ಹುಚ್ಚಾಟ: ವಿಡಿಯೋ ವೈರಲ್
ಸ್ಥಳೀಯ ಆಡಳಿತದ ವಿಫಲತೆಯಿಂದ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರತಿದಿನ ಒಂದಿಲ್ಲೊಂದು ಪ್ರದೇಶದಲ್ಲಿ ನಾಯಿ ಕಡಿತ ಪ್ರಕರಣಗಳು ವರದಿಯಾಗುತ್ತಿದ್ದು, ಕಳೆದ ಐದು–ಆರು ತಿಂಗಳಲ್ಲಿ ಮಾತ್ರವೇ 15ಕ್ಕೂ ಹೆಚ್ಚು ಜನರು ನಾಯಿ ಕಡಿತಕ್ಕೊಳಗಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಮಸ್ಯೆ ನಿಯಂತ್ರಣಕ್ಕೆ ತ್ವರಿತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಕುರಿತು ನಗರಸಭಾ ಪೌರಾಯುಕ್ತರನ್ನು ಪ್ರಶ್ನಿಸಿದಾಗ, ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದು, ಸ್ಥಳೀಯರು ಕಚ್ಚುವ ನಾಯಿಯ ಬಗ್ಗೆ ಖಚಿತ ಮಾಹಿತಿ ನೀಡಿದರೆ ಅದನ್ನು ಹಿಡಿದು ರೇಬಿಸ್ ಪರೀಕ್ಷೆಗೊಳಪಡಿಸಿ ಚಿಕಿತ್ಸೆ ನೀಡಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.
ಆದರೆ, ಇದು ತಾತ್ಕಾಲಿಕ ಪರಿಹಾರವಾಗಿದ್ದು, ದೀರ್ಘಕಾಲಿಕವಾಗಿ ಬೀದಿ ನಾಯಿಗಳ ನಿಯಂತ್ರಣ, ಸಂತಾನ ಹರಣ, ಲಸಿಕೆ ವಿತರಣೆ ಹಾಗೂ ಆಹಾರ ನಿರ್ವಹಣೆಗೆ ವ್ಯವಸ್ಥಿತ ಯೋಜನೆ ರೂಪಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.























