ದಾಂಡೇಲಿ : ಕಳೆದ ಮೂರು ತಿಂಗಳಿಂದ ಕಾಳಿ ನದಿಯಲ್ಲಿ ಜಲಸಾಹಸ ಕ್ರೀಡೆಗಳಿಗೆ ಮಳೆಗಾಲದ ನಿಮಿತ್ತ ಜಿಲ್ಲಾಡಳಿತ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಪ್ರವಾಸಿಗರ ಸುರಕ್ಷತೆಯ ದೃಷ್ಠಿಯಿಂದ ನಿಷೇಧ ವಿಧಿಸಿತ್ತು. ಈ ಆದೇಶ ಮೀರಿ ಗಣೇಶಗುಡಿಯ ಕಾಳಿ ತೀರದ ರೆಸಾರ್ಟಗಳು ಅಕ್ರಮವಾಗಿ ಜಲ ಸಾಹಸ ಕ್ರೀಡೆಗಳನ್ನು ಮಾಡಿದಲ್ಲಿ ಅವರ ಲೈಸೆನ್ಸ್ ರದ್ದುಪಡಿಸಿ ಕಪ್ಪು ಪಟ್ಟಿಗೆ ಸೇರಿಸಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೋಟಿಸು ನೀಡಲಾಗಿತ್ತು.
ಈ ಹಿನ್ನಲೆಯಲ್ಲಿ ಜಲಸಾಹಸ ಕ್ರೀಡೆ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಪ್ರವಾಸೋದ್ಯಮವನ್ನೆ ಅವಲಂಬಿಸಿದ ಜನರು ಉದ್ಯೋಗವಿಲ್ಲದೆ ಕಳೆದ ಮೂರು ತಿಂಗಳಿಂದ ನಿರುದ್ಯೋಗಿಗಳಾಗಿ ಜೀವನ ನಿರ್ವಹಣೆಗೆ ಪರದಾಡುತ್ತಿದ್ದರು.
ಮಳೆಯಿಂದ ಸೂಪಾ ಜಲಾಶಯ ಭರ್ತಿಯಾಗಿ ನೀರು ಹೊರಬಿಡುವ ಸಾಧ್ಯತೆ ಇತ್ತು. ಈಗ ಮಳೆ ಕಡಿಮೆಯಾಗಿದ್ದು ಜಲಾಶಯದ ಒಳಹರಿವು ಕಡಿಮೆಯಾಗಿರುವದರಿಂದ ಜಿಲ್ಲಾಧಿಕಾರಿಗಳು ದಾಂಡೇಲಿ, ಗಣೇಶಗುಡಿ ಕಾಳಿ ನದಿಯಲ್ಲಿ ಜಲಕ್ರೀಡೆಗಳಾದ ಬೋಟಿಂಗ್, ರಾಷ್ಟಿಂಗ್, ಕಯಾಕಿಂಗ್, ಮತ್ತಿತರ ಚಟುವಟಿಕೆಗೆ ಅವಕಾಶ ಮಾಡಿ ಆದೇಶ ನೀಡಿದ್ದಾರೆ.ಇದರಿಂದ ದಾಂಡೇಲಿ ಪ್ರವಾಸೋದ್ಯಮಕ್ಕೆ ಜೀವ ಕಳೆ ಬರುತ್ತಿದೆ.
ಪ್ರವಾಸಿಗರು ದಾಂಡೇಲಿಯತ್ತ ಮುಖ ಮಾಡಿದ್ದಾರೆ. ಇದು ಪ್ರವಾಸೋದ್ಯಮಿಗಳಿಗೆ ಮತ್ತು ಪ್ರವಾಸೋದ್ಯಮ ಅವಲಂಭಿತ ಉದ್ಯೋಗಿಗಳಿಗೆ ನೆಮ್ಮದಿ ತಂದಿದೆ.