ದಾಂಡೇಲಿ: ದಾಂಡೇಲಿಯಲ್ಲಿ ಆಯೋಜನೆಗೊಂಡಿರುವ 25ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಚಾರ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ನೀಡಿದೆ. ಸಮ್ಮೇಳನಕ್ಕೆ ಸಂಬಂಧಿಸಿದ ಅನುಮತಿ, ದೇಣಿಗೆ ಸಂಗ್ರಹ ಹಾಗೂ ಸಾರ್ವಜನಿಕ ಅಡೆತಡೆಗಳ ಬಗ್ಗೆ ಉದ್ಭವಿಸಿದ ವಿವಾದಗಳು ಪ್ರಕರಣಕ್ಕೆ ಕಾರಣವಾಗಿವೆ.
ಅನುಮತಿ ಇಲ್ಲದೆ ಫ್ಲೆಕ್ಸ್ ಹಾಗೂ ದೇಣಿಗೆ ಸಂಗ್ರಹ?: ಅಜೀವ ಸದಸ್ಯರಾದ ಅಕ್ರಮ್ ಖಾನ್, ಸಂದೀಪ ಭಂಡಾರಿ ಮತ್ತು ಪ್ರವೀಣ್ ಕೊಠಾರಿ ಸಲ್ಲಿಸಿದ ಅರ್ಜಿಯಲ್ಲಿ, ಸಮ್ಮೇಳನದ ಆಯೋಜಕರು ರಾಜ್ಯ ಅಧ್ಯಕ್ಷರ ಅನುಮತಿ ಪಡೆಯದೇ ಕಾರ್ಯಕ್ರಮ ಪ್ರಚಾರ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ.
ಅದೇ ರೀತಿಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲೂ ಸಂಚಾರಕ್ಕೆ ತೊಂದರೆ ಉಂಟಾಗುವಂತೆ ಫ್ಲೆಕ್ಸ್, ಬ್ಯಾನರ್ ಮತ್ತು ಕಟೌಟ್‌ಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಲಾಗಿದೆ. ಅಲ್ಲದೆ, ನಿಯಮ ಪಾಲಿಸದೇ ದೇಣಿಗೆ ಸಂಗ್ರಹಣೆ ನಡೆಸಲಾಗುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಕೋರ್ಟ್‌ನಲ್ಲಿ ನಡೆಯಿತು ವಿಶೇಷ ಘಟನೆ: ಪ್ರಕರಣ ಗುರುವಾರ ವಿಚಾರಣೆಗೆ ಬಂದಾಗ, ಜಿಲ್ಲಾ ಕಸಾಪ ಅಧ್ಯಕ್ಷ ಬೊಮ್ಮಯ್ಯ ಎನ್. ನಾಯಕ (ವಾಸರೆ) ಅವರು ನ್ಯಾಯಾಲಯದಿಂದ ಸಮನ್ಸ್ ಬರಲೇ ಇಲ್ಲದಿದ್ದರೂ ತಮ್ಮ ವಕೀಲರೊಂದಿಗೆ ನೇರವಾಗಿ ಕೋರ್ಟ್‌ನಲ್ಲಿ ಹಾಜರಾದರು. ಇದನ್ನು ಗಮನಿಸಿದ ನ್ಯಾಯಾಧೀಶರು, “ನಾವು ನೋಟಿಸ್ ಮಾಡದ ಮುನ್ನ ಯಾಕೆ ಹಾಜರಾಗಿದ್ದೀರಿ?” ಎಂದು ಪ್ರಶ್ನಿಸಿದರು. ನಂತರ, ಬೊಮ್ಮಯ್ಯ ನಾಯಕರ ಪರ ವಕೀಲರು ತಮ್ಮ ಮನವಿಯನ್ನು ಮಂಡಿಸಲು ಅವಕಾಶ ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿದರು.
ಅಜೀವ ಸದಸ್ಯರ ಪರ ಬಲವಾದ ವಾದ: ಅಜೀವ ಸದಸ್ಯರ ಪರ ವಾದ ಮಂಡಿಸಿದ ವಕೀಲ ರಾಘವೇಂದ್ರ ಗಡೆಪ್ಪನವರ, ಕಸಾಪ ನಿಯಮಾವಳಿ (ಬೈಲಾ) ಪ್ರಕಾರ ಸಮ್ಮೇಳನ ನಡೆಸಲು ಅಧ್ಯಕ್ಷರ ಅಥವಾ ಆಡಳಿತಾಧಿಕಾರಿಯ ಸ್ಪಷ್ಟ ಅನುಮತಿ ಅಗತ್ಯ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ತಕ್ಷಣ ಫ್ಲೆಕ್ಸ್ ತೆರವುಗೊಳಿಸುವಂತೆ ಆದೇಶ: ಎರಡೂ ಪಕ್ಷಗಳ ವಾದ ಆಲಿಸಿದ ನ್ಯಾಯಾಲಯ, ಜಿಲ್ಲಾ ಕಸಾಪ ಅಧ್ಯಕ್ಷ ಬೊಮ್ಮಯ್ಯ ಎನ್. ನಾಯಕ (ವಾಸರೆ) ಅವರಿಗೆ ತಕ್ಷಣವೇ ಎಲ್ಲಾ ಫ್ಲೆಕ್ಸ್, ಬ್ಯಾನರ್, ಕಟೌಟ್ ತೆರವುಗೊಳಿಸುವಂತೆ ಆದೇಶಿಸಿದೆ. “ಆದೇಶ ಪಾಲಿಸದಿದ್ದರೆ ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಸಮ್ಮೇಳನದ ಭವಿಷ್ಯ ಅನುಮಾನದಲ್ಲಿ?: ಪ್ರಕರಣದ ಮುಂದಿನ ವಿಚಾರಣೆಯನ್ನು ನಾಳೆ ಶುಕ್ರವಾರಕ್ಕೆ ಮುಂದೂಡಲಾಗಿದೆ. ಇದರಿಂದಲೇ 25ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತದೆಯೇ ಅಥವಾ ರದ್ದು ಆಗುತ್ತದೆಯೇ ಎಂಬ ಆತಂಕ ಕಸಾಪ ವಲಯದಲ್ಲಿ ಹೆಚ್ಚಾಗಿದೆ.
ಜಿಲ್ಲಾ ಮಟ್ಟದಲ್ಲಿ ಸಾಹಿತ್ಯ ಪ್ರೇಮಿಗಳು ಹಾಗೂ ಜನತೆ ಈ ಬೆಳವಣಿಗೆಯನ್ನು ಹೆಚ್ಚಿನ ಕುತೂಹಲದಿಂದ ಗಮನಿಸುತ್ತಿದ್ದು, ವಿಷಯವು ಸ್ಥಳೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.























