ಕಾಳಿ ನದಿ ರಾಫ್ಟಿಂಗ್‌ಗೆ ಹೊಸ ತಿರುವು: ಪರಿಸರ vs ಪ್ರವಾಸೋದ್ಯಮ ಚರ್ಚೆ
ದಾಂಡೇಲಿ (ಉತ್ತರ ಕನ್ನಡ): ಜಿಲ್ಲೆಯ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿರುವ ಕಾಳಿ ನದಿಯಲ್ಲಿ ನಡೆಯುತ್ತಿರುವ ರಾಫ್ಟಿಂಗ್ ಚಟುವಟಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಕಳೆದ ಸುಮಾರು 25 ವರ್ಷಗಳಿಂದ ಸರ್ಕಾರದ ಸ್ವಾಮ್ಯದ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ (Jungle Lodges and Resorts) ಸಂಸ್ಥೆ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸುಮಾರು 9 ಕಿ.ಮೀ. ದೂರದಲ್ಲಿ ನಿರಂತರವಾಗಿ ರಾಫ್ಟಿಂಗ್ ನಡೆಸುತ್ತಿದೆ.
ಸಾವಿರಾರು ಪ್ರವಾಸಿಗರು ಈ ಸಾಹಸ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದು, ದಾಂಡೇಲಿಯ ಪ್ರವಾಸೋದ್ಯಮಕ್ಕೆ ಇದು ಪ್ರಮುಖ ಆಕರ್ಷಣೆಯಾಗಿ ಬೆಳೆಯಿತು. ಆದರೆ 2024ರಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯು ಖಾಸಗಿ ಸಂಸ್ಥೆಗೆ ರಾಫ್ಟಿಂಗ್ ನಡೆಸಲು ಅನುಮತಿ ನೀಡಿದ ಬಳಿಕ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಯ ವಿಚಾರಗಳು ಹೊಸದಾಗಿ ಚರ್ಚೆಗೆ ಬಂದಿವೆ.
25 ವರ್ಷಗಳಿಂದ ರಾಫ್ಟಿಂಗ್ ನಡೆದಿರುವುದು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಸಾಹಸ ಕ್ರೀಡೆ ನಡೆಸುವುದು ಸಾಧ್ಯ ಎಂಬುದನ್ನು ತೋರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿ ಸಂಸ್ಥೆಯನ್ನು ತಡೆಯಲು ಮೊಸಳೆಗಳನ್ನು ನೆಪ ಮಾಡುವುದು ನಿಜಕ್ಕೂ ಅಸಂಗತವಾಗಿದೆ.
ಖಾಸಗಿ ಸಂಸ್ಥೆಯ ರಾಫ್ಟಿಂಗ್‌ಗೆ ವಿರೋಧ ವ್ಯಕ್ತಪಡಿಸಿರುವ ಕೆಲವರು, ಈ ಚಟುವಟಿಕೆ ಹಾರ್ನ್‌ಬಿಲ್ ಪಕ್ಷಿಗಳ ಸಂರಕ್ಷಣಾ ಪ್ರದೇಶಕ್ಕೆ ತೊಂದರೆ ಉಂಟುಮಾಡಬಹುದು ಹಾಗೂ ನದಿಯಲ್ಲಿ ಮೊಸಳೆಗಳಿರುವುದರಿಂದ ಪ್ರವಾಸಿಗರಿಗೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ, ಕಳೆದ ಹಲವು ವರ್ಷಗಳಿಂದ ಇದೇ ನದಿಯಲ್ಲಿ ರಾಫ್ಟಿಂಗ್ ನಡೆಯುತ್ತಿರುವ ಸಂದರ್ಭದಲ್ಲಿ ಪರಿಸರ ಅಥವಾ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಏಕೆ ಎದುರಾಗಲಿಲ್ಲ ಎಂಬ ಪ್ರಶ್ನೆ ಕೂಡ ಎದ್ದಿದೆ. ಇದರಿಂದ ಪರಿಸರ ಕಾಳಜಿಗಿಂತಲೂ ಸ್ಪರ್ಧೆ ಮತ್ತು ಏಕಾಧಿಕಾರದ ಪ್ರಶ್ನೆ ಈ ವಿವಾದದ ಹಿನ್ನೆಲೆಯಲ್ಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆ ಪ್ರವಾಸಿಗರಿಗೆ ಉತ್ತಮ ಸೇವೆ ಮತ್ತು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟ ನೀತಿ ರೂಪಿಸಿ ಎಲ್ಲ ಸಂಸ್ಥೆಗಳಿಗೆ ಸಮಾನ ನಿಯಮ ಅನ್ವಯಿಸುವಂತೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.























