ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಕೈಗಾರಿಕಾ ನಗರವಾದ ದಾಂಡೇಲಿಯ ಕೈಗಾರಿಕೆಗಳು ಮತ್ತು ಅಭಿವೃದ್ಧಿ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಕೇಂದ್ರ ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಲಭಿಸಿದೆ.
ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, “ದಾಂಡೇಲಿಯ ಕೈಗಾರಿಕೆಗಳ ಸ್ಥಿತಿ, ಜನರ ಬದುಕಿನ ಸಂಕಷ್ಟಗಳ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಹಿಂದೆ ಸ್ವತಃ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದೇನೆ. ನನ್ನಿಂದಾದ ಸಹಾಯ ಮತ್ತು ಕ್ರಮಗಳನ್ನು ಕೈಗೊಳ್ಳುತ್ತೇನೆ,” ಎಂದು ಭರವಸೆ ನೀಡಿದ್ದಾರೆ.
ಇಂದು (ಅ. 25) ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿದ ರಾಜ್ಯ ಜೆಡಿಎಸ್ ಕಾರ್ಯದರ್ಶಿ ಹಾಗೂ ವಕ್ತಾರ ರೋಷನ್ ಬಾವಾಜಿ, ದಾಂಡೇಲಿಯ ಕೈಗಾರಿಕೆ ಮತ್ತು ಜನರ ಹಿತಾಸಕ್ತಿಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಅವರು ದಾಂಡೇಲಿಯ ಮುಚ್ಚಿದ ಕೈಗಾರಿಕೆಗಳ ಪುನಶ್ಚೇತನ, ಹೊಸ ಕೈಗಾರಿಕೆಗಳ ಸ್ಥಾಪನೆ, ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿ, ಹಾಗೂ ಕೇಂದ್ರದ ನೆರವಿನಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಇ.ಎಸ್.ಐ. ಆಸ್ಪತ್ರೆಯ ಅಭಿವೃದ್ಧಿ, ಜೊತೆಗೆ ಕೇಂದ್ರ ಯೋಜನೆಯಡಿ ಪ್ರಾರಂಭಗೊಂಡಿರುವ ಜಿ+2 ವಸತಿ ಯೋಜನೆ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಂಚುವಂತೆ ಆಗ್ರಹಿಸಿದರು.
ಜನರ ಕಲ್ಯಾಣ ಹಾಗೂ ಪ್ರಗತಿಗೆ ದಾಂಡೇಲಿಯ ಹಳೆಯ ಬೇಡಿಕೆಗಳನ್ನು ಇಡೇರಿಸಲು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು, “ದಾಂಡೇಲಿಯ ಅಭಿವೃದ್ಧಿ ನನ್ನ ಗಮನದಲ್ಲಿದೆ. ಸಾಧ್ಯವಾದ ಎಲ್ಲ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಹೇಳಿದರು.

























