ನಗರಸಭಾ ಸದಸ್ಯರಿಂದ ಅವಧಿ ಕೊನೆ ಹಂತದಲ್ಲಿ ಮೋಜಿನ ಅಧ್ಯಯನ ಪ್ರವಾಸ

0
59

ದಾಂಡೇಲಿ : ನಗರಸಭಾ ಸದಸ್ಯತ್ವದ ಅವಧಿ ಮುಗಿಯಲು ಒಂದು ವಾರವಿದ್ದಾಗ ದಾಂಡೇಲಿ ನಗರಸಭೆಯ ಪೌರಾಯುಕ್ತರು, ನಗರಸಭೆಯ ಆಡಳಿತ ಮತ್ತು ವಿರೋಧ ಪಕ್ಷದ ನಗರಸಭಾ ಸದಸ್ಯರನ್ನೊಳಗೊಂಡ 30 ಜನರ ತಂಡ ಹೈದ್ರಾಬಾದಿಗೆ ಕಸದಿಂದ ಇಂಧನವನ್ನು ಪೂರೈಸುವ ಅಧ್ಯಯನ ಪ್ರವಾಸಕ್ಕಾಗಿ ಹೋಗಿದ್ದಾರೆ.

ಈ ಪ್ರವಾಸ ಇದೀಗ ನಗರದಲ್ಲಿ ಸಾರ್ವಜನಿಕ ಚರ್ಚೆಗೆ ಗ್ರಾಸಾಗಿದೆ. ಹೈದ್ರಾಬಾದಿಗೆ ತೆರಳಿದ ಈ ಸದಸ್ಯರ ತಂಡ ಅಲ್ಲಿಯ ದಕ್ಷಿಣ ಭಾರತದ ಪ್ರಪ್ರಥಮ ಕಸದಿಂದ ಇಂಧನವನ್ನು ಪೂರೈಸುವ ಘಟಕದ ಮುಂದೆ ನಿಂತು ಜನಪ್ರತಿನಿಧಿಗಳಾಗಿ ತಾವು ಮಾಡುತ್ತಿರುವ ಘನಕಾರ್ಯದ ಬಗ್ಗೆ ನಗರದಲ್ಲಿ ಹಲವರಿಗೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ನಗರದಲ್ಲಿ ಸರಿಯಾಗಿ ಕಸ ವಿಲೇವಾರಿಯಾಗುತ್ತಿಲ್ಲ. ರಸ್ತೆಗಳು ಗುಂಡಿ ಬಿದ್ದು, ಧೂಳು ಹಾರಿ ಜನರ ಆರೋಗ್ಯ ಕೆಡುತ್ತಿದೆ. ಆದರೆ ಇದರ ಕಾಳಜಿ ತೋರ ಬೇಕಾದವರು ನಾಲ್ಕೈದು ಲಕ್ಷ ರೂಪಾಯಿ ನಗರಸಭೆ ಅನುಧಾನ ಖರ್ಚು ಮಾಡಿ ಅಧ್ಯಯನದ ಹೆಸರಿನಲ್ಲಿ ಟೂರ್ ಹೋಗಿದ್ದಾರೆ. ಇವರ ಅಧಿಕಾರಾವಧಿ ಕೇವಲ ಮೂರ್ನಾಲ್ಕು ದಿನ ಮಾತ್ರ ಇದೆ.

ಹೀಗಿರುವಾಗ ಈ ಅಧ್ಯಯನ ಯಾತ್ರೆಯಿಂದ ಊರಿಗೇನು ಪ್ರಯೋಜನ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಆಡಳಿತ ನಿರ್ವಹಿಸುವ ಪಕ್ಷದ ಸದಸ್ಯರ ಲೋಪ ದೋಷಗಳನ್ನುವಿರೋಧಿಸಬೇಕಾದ ವಿರೋಧ ಪಕ್ಷದ ಬಿ.ಜೆ.ಪಿ.ನಗರಸಭಾ ಸದಸ್ಯರು ಅವರೊಟ್ಟಿಗೆ ಕೈ ಜೋಡಿಸಿ ಯಾತ್ರೆ ಹೊರಟಿದ್ದು ಟೀಕೆಗೆ ಗುರಿಯಾಗಿದೆ.

ನವಂಬರ 9 ರೊಳಗಾಗಿ ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಅವಧಿ ಮುಕ್ತಾಯಗೊಳ್ಳುತ್ತಿದೆ. ದಾಂಡೇಲಿ ನಗರಸಭೆಯ ಆಡಳಿತಾವಧಿ ಅಕ್ಟೋಬರ್ 31 ರಂದು ಮುಗಿಯಲಿದೆ ಎಂದು ಮಾಹಿತಿ ಬಂದಿದೆ. ಈ ಹಂತದಲ್ಲಿ ಮತ್ತೇ ಸದ್ಯದಲ್ಲಿ ನಗರಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ.

ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಸಾಧ್ಯತೆ ಇದೆ. ಹೀಗಿರುವಾಗ ನಗರಸಭೆ ಬೊಕ್ಕಸಕ್ಕೆ ಖರ್ಚು ಹಾಕಿ ನಗರೋದ್ಧಾರಕ್ಕಾಗಿ ಅಧ್ಯಯನ ಮಾಡಿ ಬಂದಿರುವ ನಗರಸಭಾ ಸದಸ್ಯರ ಅವಧಿಯೇ ಮುಗಿಯುತ್ತಿರುವಾಗ ಇವರು ನಗರಕ್ಕೇನು ಮಾಡಬಲ್ಲರು ಎಂದು ಜನ ಪ್ರಶ್ನಿಸುತ್ತಿದ್ದಾರೆ.

Previous articleWPL 2026: ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು RCBಯ ‘ಪಂಚತಂತ್ರ’!
Next articleಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: 8ನೇ ವೇತನ ಆಯೋಗಕ್ಕೆ ಅಧಿಕೃತ ಒಪ್ಪಿಗೆ

LEAVE A REPLY

Please enter your comment!
Please enter your name here