ದಾಂಡೇಲಿ: 2018ರಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ದಾಂಡೇಲಿಯ ಹಿರಿಯ ವಕೀಲ ಹಾಗೂ ಕ್ರಿಯಾಶೀಲ ಹೋರಾಟಗಾರ ಅಜಿತ್ ನಾಯ್ಕ ಅವರ ಕಗ್ಗೊಲೆ ಪ್ರಕರಣದ ವಿಚಾರಣೆ ಇದೀಗ ಅಂತಿಮ ಹಂತವನ್ನು ತಲುಪಿದೆ. ಈ ಪ್ರಕರಣದ ವಿಚಾರಣೆ ಶಿರಸಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪೀಠದಲ್ಲಿ ಸುದೀರ್ಘವಾಗಿ ನಡೆದು, ಇದೀಗ ತೀರ್ಪು ಪ್ರಕಟವಾಗುವ ಹಂತಕ್ಕೆ ಬಂದಿದೆ.
ದಾಂಡೇಲಿಯನ್ನು ಬೆಚ್ಚಿಬೀಳಿಸಿದ್ದ ಬರ್ಬರ ಹತ್ಯೆ: ದಾಂಡೇಲಿಯಲ್ಲಿ ತಾಲೂಕು ರಚನೆಗೆ ಪ್ರಮುಖ ಕಾರಣರಾಗಿದ್ದ ಅಜಿತ್ ನಾಯ್ಕ, 2018ರಲ್ಲಿ ತಮ್ಮ ಕಚೇರಿ ಎದುರೇ ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೀಡಾಗಿದ್ದರು. ಈ ಘಟನೆ ದಾಂಡೇಲಿ ನಗರದ ಇತಿಹಾಸದಲ್ಲೇ ಕಂಡರಿಯದಂತಹ ಹಿಂಸಾತ್ಮಕ ಕೃತ್ಯವಾಗಿದ್ದು, ನಗರವನ್ನೇ ಭಯಭೀತಗೊಳಿಸಿತ್ತು. ಜನಸಾಮಾನ್ಯರಲ್ಲಿ ಆತಂಕ, ಆಕ್ರೋಶ ಮತ್ತು ಅಸಹಾಯಕತೆ ಮೂಡಿಸಿತ್ತು.
ಇದನ್ನೂ ಓದಿ: ಇಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೊ ಅಭಿಯಾನ: 62.40 ಲಕ್ಷ ಮಕ್ಕಳಿಗೆ ಲಸಿಕೆ ಗುರಿ
ವಕೀಲ, ಹೋರಾಟಗಾರ, ಚಿಂತಕ – ಬಹುಮುಖ ವ್ಯಕ್ತಿತ್ವ: ಅಜಿತ್ ನಾಯ್ಕ ಅವರು ಕೇವಲ ವಕೀಲರಷ್ಟೇ ಅಲ್ಲದೆ, ಪ್ರಖ್ಯಾತ ಕಾನೂನು ಪಂಡಿತ ಕ್ರಿಯಾಶೀಲ ಸಾಮಾಜಿಕ ಹೋರಾಟಗಾರ ಚಿಂತಕ ಹಾಗೂ ಸಂಘಟಕ ಸ್ಥಳೀಯ ರಾಜಕಾರಣದಲ್ಲಿ ದಿಟ್ಟ ಧ್ವನಿ ಎಂಬಂತೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದವರು. ಮೂರು ದಶಕಗಳ ಹಿಂದೆ ಆರಂಭಿಸಿದ್ದ ದಾಂಡೇಲಿಯನ್ನು ತಾಲೂಕಾಗಿಸುವ ಹೋರಾಟ ಹಾಗೂ ದಾಂಡೇಲಿ ಬಚಾವೋ ಅಂದೋಲನ ಮೂಲಕ ಅವರು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದರು.
ಪ್ರಬಲ ರಾಜಕೀಯರಿಗೆ ಸವಾಲು: ಅಜಿತ್ ನಾಯ್ಕ ಅವರ ಹೋರಾಟಗಳು ಸ್ಥಳೀಯವಾಗಿ ಅಜೇಯರೆಂದು ಭಾವಿಸಿದ್ದ ಹಲವಾರು ಶಾಸಕರು ಹಾಗೂ ಮಂತ್ರಿಗಳ ರಾಜಕೀಯ ಪತನಕ್ಕೂ ಕಾರಣವಾಗಿದ್ದವು. ಜನಪರ ನಿಲುವು, ನಿರ್ಭೀತ ವಾದ ಮತ್ತು ನ್ಯಾಯಪರ ಹೋರಾಟಗಳಿಂದ ಅವರು ಜನಮನ ಗೆದ್ದಿದ್ದರು.
ಇದನ್ನೂ ಓದಿ: 1000 ಕೋಟಿ ರೂ. ಸೈಬರ್ ಅಪರಾಧ ಜಾಲ ಬಯಲು: ಕರೆಂಟ್ ಅಕೌಂಟ್ ಮಾರಾಟ ದಂಧೆ ಬೆಚ್ಚಿಬೀಳಿಸಿದ ತನಿಖೆ
ವಕೀಲ ವೃತ್ತಿಯೇ ಮುಳುವಾಯಿತೇ?: ಭೂ ವ್ಯಾಜ್ಯಗಳಲ್ಲಿ ಕಕ್ಷಿದಾರರ ಪರವಾಗಿ ನಿರ್ಭೀತವಾಗಿ ನಿಂತ ಅಜಿತ್ ನಾಯ್ಕ, ಭೂ ಮಾಫಿಯಾ ವಿರುದ್ಧ ಧ್ವನಿ ಎತ್ತುತ್ತಿದ್ದವರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಭೂ ವ್ಯಾಜ್ಯಗಳು ಹೆಚ್ಚಾಗುತ್ತಿದ್ದಂತೆ, ಅವರ ವಕೀಲ ವೃತ್ತಿಯೇ ಅವರಿಗೆ ಅಪಾಯವಾಗಿ ಪರಿಣಮಿಸಿತೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿತ್ತು.
ದಾಂಡೇಲಿ ಯಜಮಾನನಿಲ್ಲದ ಮನೆಯಂತಾಯಿತು: ಅಜಿತ್ ನಾಯ್ಕ ಅವರ ಅಗಲುವಿಕೆಯಿಂದ ದಾಂಡೇಲಿ ಯಜಮಾನನಿಲ್ಲದ ಮನೆಯಂತಾಯಿತು ಎಂಬ ಭಾವನೆ ಜನರಲ್ಲಿ ಬೇರೂರಿತ್ತು. ಅವರ ನಂತರ ದಾಂಡೇಲಿಗೆ ಸಮಾನ ಪರ್ಯಾಯ ಧುರೀಣತ್ವದ ಕೊರತೆ ತೀವ್ರವಾಗಿ ಕಾಡಿತು. ಸಾಮಾಜಿಕ ಹೋರಾಟಗಳಲ್ಲಿ ಒಂದು ಶೂನ್ಯತೆ ನಿರ್ಮಾಣವಾಯಿತು.
ಇದನ್ನೂ ಓದಿ: ಕನಿಷ್ಠ ತಾಪಮಾನದಲ್ಲಿ ಬೆಳಗಾವಿ ಮುಂಚೂಣಿ: ಉತ್ತರ ಕರ್ನಾಟಕ ಕಡುಚಳಿಯ ಹಿಡಿತದಲ್ಲಿ
ತಕ್ಷಣದ ಪೊಲೀಸ್ ಕಾರ್ಯಾಚರಣೆ: ಘಟನೆಯ ನಂತರ ಸ್ಥಳೀಯ ಪೊಲೀಸರು ತ್ವರಿತ ಕಾರ್ಯಪ್ರವರ್ತರಾಗಿದ್ದು, ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಬಂಧಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿತ್ತು.
ಸಮರ್ಥ ಸರ್ಕಾರಿ ವಾದ, ಸುದೀರ್ಘ ವಿಚಾರಣೆ: ಶಿರಸಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ದೀರ್ಘಕಾಲ ನಡೆಯಿತು. ದಕ್ಷ ಸರ್ಕಾರಿ ಅಭಿಯೋಜಕರಾದ ರಾಜೇಶ ಮಳಗೀಕರ ಅವರು ಸರ್ಕಾರದ ಪರವಾಗಿ ಸಮರ್ಥವಾದ ವಾದ ಮಂಡಿಸಿದ್ದು, ಸಾಕ್ಷ್ಯಾಧಾರಗಳು, ದಾಖಲೆಗಳು ಹಾಗೂ ಸಾಕ್ಷಿಗಳ ಪರಿಶೀಲನೆ ಸಂಪೂರ್ಣಗೊಂಡಿದೆ.
ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ಬಿಜೆಪಿ ಕಾರ್ಯಕರ್ತೆ ಆತ್ಮಹತ್ಯೆ
ತೀರ್ಪಿಗೆ ಕ್ಷಣಗಣನೆ: ವಿಚಾರಣೆ ಅಂತಿಮ ಹಂತ ತಲುಪಿರುವ ಹಿನ್ನೆಲೆಯಲ್ಲಿ, ಇನ್ನೂ ಕೆಲವೇ ದಿನಗಳಲ್ಲಿ ತೀರ್ಪು ಹೊರಬೀಳುವ ನಿರೀಕ್ಷೆ ವ್ಯಕ್ತವಾಗಿದೆ. ಅಜಿತ್ ನಾಯ್ಕ ಹತ್ಯೆ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಎಂಬುದು ದಾಂಡೇಲಿಯ ಜನರ ಬಹುದಿನಗಳ ಬೇಡಿಕೆ ಆಗಿದ್ದು, ಇದೀಗ ಎಲ್ಲರ ಕಣ್ಣು ನ್ಯಾಯಾಲಯದ ತೀರ್ಪಿನ ಮೇಲೆ ನೆಟ್ಟಿದೆ.









