ವನ್ಯಜೀವಿ–ಮಾನವ ಸಂಘರ್ಷ ಹೆಚ್ಚಳ: ದಾಂಡೇಲಿಯಲ್ಲಿ ಮೊಸಳೆಗಳ ಸಂಚಾರ – ಜನರಲ್ಲಿ ಭೀತಿ ಹೆಚ್ಚಳ
ದಾಂಡೇಲಿ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಮೊಸಳೆಗಳು ಗಲ್ಲಿಗಲ್ಲಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಘಟನೆಗಳು ಜನರಲ್ಲಿ ಆತಂಕ ಮತ್ತು ಭೀತಿಯನ್ನು ಉಂಟುಮಾಡಿವೆ. ಮನೆಗಳ ಬಳಿ, ರಸ್ತೆಗಳ ಅಂಚಿನಲ್ಲಿ ಹಾಗೂ ಕಾಲುವೆಗಳ ಸಮೀಪ ಮೊಸಳೆಗಳು ಕಾಣಿಸಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ದಾಂಡೇಲಿ ನಗರವು ಕಾಳಿ ನದಿಯ ತೀರದಲ್ಲಿ ಸ್ಥಿತಿಯಲ್ಲಿದ್ದು, ಈ ನದಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಅನೇಕ ವನ್ಯಜೀವಿಗಳಿಗೆ ಸಹಜ ವಾಸಸ್ಥಾನವಾಗಿದೆ. ಮೊಸಳೆಗಳಿಗೂ ಇದೇ ಪ್ರದೇಶವು ಪ್ರಮುಖ ಆವಾಸವಾಗಿದ್ದು, ಸಾಮಾನ್ಯವಾಗಿ ಅವು ನದಿ ಮತ್ತು ಅದರ ಸಂಪರ್ಕದಲ್ಲಿರುವ ನೀರಿನ ಮೂಲಗಳಲ್ಲಿಯೇ ವಾಸಿಸುತ್ತವೆ.
ಆದರೆ ಕಳೆದ ಕೆಲವು ವರ್ಷಗಳಿಂದ ನದಿ ತೀರ ಪ್ರದೇಶಗಳಲ್ಲಿ ಅನಿಯೋಜಿತ ನಗರ ವಿಸ್ತರಣೆ, ಕಾಲುವೆಗಳ ದುಸ್ಥಿತಿ ಹಾಗೂ ಪರಿಸರ ಸಮತೋಲನದ ಹಾನಿ ಹೆಚ್ಚುತ್ತಿರುವುದು ವನ್ಯಜೀವಿಗಳ ಸಹಜ ವಾಸಸ್ಥಾನಕ್ಕೆ ಧಕ್ಕೆ ತಂದಿದೆ ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ. ಇದರ ಪರಿಣಾಮವಾಗಿ ಮೊಸಳೆಗಳು ತಮ್ಮ ಸಹಜ ವಾಸಸ್ಥಾನವನ್ನು ಬಿಟ್ಟು ನಗರ ಪ್ರದೇಶಗಳತ್ತ ಬರುತ್ತಿರುವ ಘಟನೆಗಳು ಹೆಚ್ಚಾಗುತ್ತಿರುವುದಾಗಿ ಹೇಳಲಾಗಿದೆ.
ಕಾಲುವೆಗಳ ದುಸ್ಥಿತಿ ಪ್ರಮುಖ ಕಾರಣ? : ಸ್ಥಳೀಯರ ಪ್ರಕಾರ ದಾಂಡೇಲಿಯ ಹಲವಾರು ಕಾಲುವೆಗಳು ಕಸದ ರಾಶಿಯಿಂದ ತುಂಬಿ ಹೋಗಿವೆ. ಮಳೆಗಾಲದಲ್ಲಿ ನೀರು ಸರಿಯಾಗಿ ಹರಿಯದ ಕಾರಣ ಕಾಲುವೆಗಳು ಹಾಗೂ ನದಿ ನಡುವೆ ಸಹಜ ನೀರಿನ ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ. ಈ ಪರಿಸ್ಥಿತಿಯಲ್ಲಿ ನದಿಯ ಜೀವಿಗಳು ನೀರಿನ ಹರಿವಿನೊಂದಿಗೆ ನಗರ ಪ್ರದೇಶಗಳತ್ತ ತಲುಪುವ ಸಾಧ್ಯತೆ ಹೆಚ್ಚುತ್ತದೆ.
ಜನರಲ್ಲಿ ಭೀತಿ : ಗಲ್ಲಿಗಳಲ್ಲಿ ಮೊಸಳೆಗಳು ಕಾಣಿಸಿಕೊಳ್ಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದರಿಂದ ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ವಿಶೇಷವಾಗಿ ಮಕ್ಕಳು ಮತ್ತು ಹಿರಿಯರು ಹೊರಗೆ ಸಂಚರಿಸುವ ಸಂದರ್ಭಗಳಲ್ಲಿ ಅಪಾಯ ಸಂಭವಿಸುವ ಭೀತಿ ವ್ಯಕ್ತವಾಗಿದೆ. ಕೆಲವರು ರಾತ್ರಿ ಸಮಯದಲ್ಲಿ ಮನೆಗಳಿಂದ ಹೊರಗೆ ಬರಲು ಸಹ ಹಿಂಜರಿಯುತ್ತಿರುವುದಾಗಿ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಕ್ರಮ: ಮೊಸಳೆಗಳು ನಗರ ಪ್ರದೇಶದಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಅವುಗಳನ್ನು ಹಿಡಿದು ಸುರಕ್ಷಿತವಾಗಿ ನದಿಗೆ ಅಥವಾ ಸೂಕ್ತ ವಾಸಸ್ಥಾನಕ್ಕೆ ಬಿಡುವ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಕ್ರಮಗಳು ಇನ್ನೂ ಅಗತ್ಯವಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಪ್ರವಾಸೋದ್ಯಮದ ಮೇಲೂ ಪರಿಣಾಮದ ಆತಂಕ: ದಾಂಡೇಲಿ ರಾಜ್ಯದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿದ್ದು, ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ಇಲ್ಲಿ ಆಗಮಿಸುತ್ತಾರೆ. ಆದರೆ ನಗರ ಪ್ರದೇಶಗಳಲ್ಲಿ ಮೊಸಳೆಗಳು ಕಾಣಿಸಿಕೊಳ್ಳುತ್ತಿರುವ ಸುದ್ದಿ ವ್ಯಾಪಕವಾಗಿ ಹರಡಿದರೆ ಪ್ರವಾಸೋದ್ಯಮಕ್ಕೂ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಶಾಶ್ವತ ಪರಿಹಾರ ಅಗತ್ಯ : ಪರಿಸರ ತಜ್ಞರು ಹಾಗೂ ಸ್ಥಳೀಯರು ಹೇಳುವಂತೆ, ಈ ಸಮಸ್ಯೆಯನ್ನು ಕೇವಲ “ಮೊಸಳೆ ಕಾಟ” ಎಂದು ನೋಡದೆ ಅದರ ಮೂಲ ಕಾರಣಗಳಿಗೆ ಪರಿಹಾರ ಕಂಡುಹಿಡಿಯಬೇಕಾಗಿದೆ.
ನದಿ ತೀರ ಪ್ರದೇಶಗಳ ರಕ್ಷಣೆ: ಕಾಲುವೆಗಳ ಸ್ವಚ್ಛತೆ ಮತ್ತು ಪುನಶ್ಚೇತನ. ನಗರ ಯೋಜನೆಗೆ ಕಟ್ಟುನಿಟ್ಟಿನ ನಿಯಂತ್ರಣದಂತ ಕ್ರಮಗಳನ್ನು ಅನುಷ್ಠಾನಗೊಳಿಸಿದರೆ ಮಾತ್ರ ದಾಂಡೇಲಿಯಲ್ಲಿ ಇಂತಹ ಘಟನೆಗಳನ್ನು ತಡೆಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತವಾಗಿದೆ.























