ಕರಾವಳಿ ಉತ್ಸವ: ಪ್ರಾಣಿಪ್ರಿಯರನ್ನು ಆಕರ್ಷಿಸಿದ ಶ್ವಾನಗಳ ಪ್ರದರ್ಶನ

0
6

ದಾಂಡೇಲಿ: ಕರಾವಳಿ ಉತ್ಸವದ ಅಂಗವಾಗಿ ಕಾರವಾರದ ಮಾಲಾದೇವಿ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಇಲಾಖೆ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಶ್ವಾನ ಪ್ರದರ್ಶನ ಕಾರ್ಯಕ್ರಮವು ಸಾರ್ವಜನಿಕರಲ್ಲಿ ಅಪಾರ ಕುತೂಹಲ ಹಾಗೂ ಸಂಭ್ರಮಕ್ಕೆ ಕಾರಣವಾಯಿತು. ವಿವಿಧ ತಳಿಗಳ ಶ್ವಾನಗಳು ತಮ್ಮ ಬುದ್ಧಿವಂತಿಕೆ, ಶಿಸ್ತಿನ ಆದೇಶ ಪಾಲನೆ, ಸಾಹಸ ಹಾಗೂ ಕೌಶಲ್ಯಗಳನ್ನು ಪ್ರದರ್ಶಿಸಿ ನೆರೆದಿದ್ದ ನೂರಾರು ಜನರನ್ನು ಆಶ್ಚರ್ಯಚಕಿತಗೊಳಿಸಿವೆ.

ಲ್ಯಾಬ್ರಾಡರ್, ಜರ್ಮನ್ ಶೆಪರ್ಡ್, ಗೋಲ್ಡನ್ ರಿಟ್ರಿವರ್, ಮುಧೋಳ ಹೌಂಡ್, ಪೊಮೇರಿಯನ್, ವೇಲ್ಷ್ ಕಾರ್ಗಿ, ರಾಜ ಪಾಳ್ಯಮ್, ಬೆಲ್ಜಿಯನ್ ಮೆಲಿನಯ್ಸ್ ಸೇರಿದಂತೆ 25ಕ್ಕೂ ಅಧಿಕ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ವಿಶೇಷವಾಗಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಕೈಗಾರಿಕಾ ಭದ್ರತಾ ಪಡೆಯ (CISF) ಶ್ವಾನಗಳು ನಡೆಸಿದ ಸಾಹಸ ಪ್ರದರ್ಶನಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.

ಇದನ್ನೂ ಓದಿ: ದಾಂಡೇಲಿ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಅರಣ್ಯ ಅಪರಾಧ ಪತ್ತೆಗೆ ಶ್ವಾನದಳ ಬಲವರ್ಧನೆ

ಪೊಲೀಸ್ ಹಾಗೂ ಕೈಗಾರಿಕಾ ಭದ್ರತಾ ಪಡೆಯ ಶ್ವಾನಗಳಿಂದ ರೋಮಾಂಚಕ ಸಾಹಸ: ಜಿಲ್ಲಾ ಪೊಲೀಸ್ ಇಲಾಖೆಯ ಶೈನಿ, ಮಾರ್ವೆಲ್ ಮತ್ತು ಅಖಿರ ಎಂಬ ಶ್ವಾನಗಳು ಶಿಸ್ತಿನ ಆದೇಶಗಳನ್ನು ಅತ್ಯಂತ ನಿಖರವಾಗಿ ಪಾಲಿಸುವ ಮೂಲಕ ತಮ್ಮ ತರಬೇತಿ ಸಾಮರ್ಥ್ಯವನ್ನು ಪ್ರದರ್ಶಿಸಿದವು. ಕೈಗಾರಿಕಾ ಭದ್ರತಾ ಪಡೆಯ ಐರಾ, ಅಭಯ್ ಮತ್ತು ಭೈರವ ಶ್ವಾನಗಳು ರೋಮಾಂಚಕ ಸಾಹಸ ಚಟುವಟಿಕೆಗಳನ್ನು ಪ್ರದರ್ಶಿಸಿ ಭರ್ಜರಿ ಚಪ್ಪಾಳೆ ಪಡೆದವು. ಈ ಶ್ವಾನಗಳ ವಿಶಿಷ್ಟ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಎರಡೂ ಇಲಾಖೆಗಳ ಶ್ವಾನಗಳಿಗೆ ರೂ.10,000 ನಗದು ಬಹುಮಾನ ನೀಡಿ ಅಭಿನಂದಿಸಿದರು.

ಬೆಂಗಳೂರಿನಿಂದ ಆಗಮಿಸಿದ್ದ ಕುಮಾರ್ ಅವರ ಎರಡು ಶ್ವಾನಗಳು ವಿವಿಧ ಆಕರ್ಷಕ ಹಾಗೂ ಬುದ್ಧಿವಂತ ಚಟುವಟಿಕೆಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರ ವಿಶೇಷ ಪ್ರಶಂಸೆಗೆ ಪಾತ್ರವಾದವು.

ಇದನ್ನೂ ಓದಿ: KSDL-ಕೃಷಿ ಮಾರಾಟ ಇಲಾಖೆ ನೇಮಕಾತಿ ಪರೀಕ್ಷೆ ದಿನಾಂಕ ಬದಲಾವಣೆ

ಶ್ವಾನ ಪ್ರದರ್ಶನದಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಶ್ವಾನಗಳು ಭಾಗವಹಿಸಿದ್ದು, ಚಾಂಪಿಯನ್ ವಿಭಾಗ ಸೇರಿದಂತೆ ಪ್ರತಿ ವಿಭಾಗದಲ್ಲೂ ವಿಜೇತ ಶ್ವಾನಗಳಿಗೆ ಬಹುಮಾನ ವಿತರಿಸಲಾಯಿತು. ಶ್ವಾನಗಳ ಸ್ಪರ್ಧೆಯಲ್ಲಿ ಸುನೀಲ್ ಉಡಾಡಿ ಅವರ ಜರ್ಮನ್ ಶೆಫರ್ಡ್ ಶ್ವಾನವು ಪ್ರಥಮ ಬಹುಮಾನವಾಗಿ ರೂ.25,000 ಪಡೆದರೆ, ವೆಂಕಪ್ಪ ನವಲಗಿ ಅವರ ಮುಧೋಳ ತಳಿ ಶ್ವಾನಕ್ಕೆ ದ್ವಿತೀಯ ಬಹುಮಾನ ರೂ.15,000 ಹಾಗೂ ಸುಹಾಸ್ ದಾವಣಗೆರೆ ಅವರ ಬೀಗಲ್ ತಳಿ ಶ್ವಾನಕ್ಕೆ ತೃತೀಯ ಬಹುಮಾನವಾಗಿ ರೂ.10,000 ನೀಡಲಾಯಿತು.

ಶ್ವಾನ ಪ್ರದರ್ಶನಕ್ಕಾಗಿ ಒಟ್ಟು 118 ಶ್ವಾನಗಳನ್ನು ನೋಂದಣಿ ಮಾಡಲಾಗಿದ್ದು, 21 ತಳಿಗಳ 52 ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿದವು. ಶ್ವಾನ ಮರಿಗಳ ವಿಭಾಗದಲ್ಲಿ 11 ಶ್ವಾನಗಳು ಭಾಗವಹಿಸಿದ್ದವು ಎಂಬುದು ವಿಶೇಷವಾಗಿತ್ತು.

ಇದನ್ನೂ ಓದಿ: ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿಲ್ಲ

ಕಾರ್ಯಕ್ರಮದ ವೇಳೆ ಪಶು ವೈದ್ಯರು ನಾಯಿಗಳನ್ನು ಆರೋಗ್ಯಕರವಾಗಿ ಪೋಷಿಸುವ ವಿಧಾನಗಳು, ಅಗತ್ಯ ಲಸಿಕೆಗಳ ಮಹತ್ವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಜೊತೆಗೆ ದೇಶಿ ತಳಿಯ ನಾಯಿ ಮರಿಗಳನ್ನು ಉಚಿತವಾಗಿ ದತ್ತು ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿತ್ತು.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯತ್ ಸಿಇಓ ಡಾ. ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಮೋಹನ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್ ಸೇರಿದಂತೆ ಪಶುಪಾಲನಾ ಇಲಾಖೆಯ ಅಧಿಕಾರಿಗಳು ವೀಕ್ಷಿಸಿ, ವಿಜೇತರಿಗೆ ಬಹುಮಾನ ವಿತರಿಸಿದರು.

Previous articleವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯೇತರ ಚಟುವಟಿಕೆ ಅಗತ್ಯ