ದಾಂಡೇಲಿ: ಕಾಳಿ ಹುಲಿ ಸಂರಕ್ಷಿತ ಪ್ರದೇಶ ದಾಂಡೇಲಿಯ ಫಣಸೋಲಿ ವನ್ಯಜೀವಿ ವಲಯದಲ್ಲಿರುವ ಆನೆ ಶಿಬಿರದಲ್ಲಿದ್ದ ಗೌರಿ ಎನ್ನುವ ಹೆಣ್ಣಾನೆಯೊಂದು ಅನಾರೋಗ್ಯದಿಂದ ಸಾವನ್ನಪ್ಪಿದೆ.
ಕಳೆದ ಕೆಲವು ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಆನೆ ಮರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ವನ್ಯಜೀವಿ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಕಳ್ಳಿಮಠ ತಿಳಿಸಿದ್ದಾರೆ.
ಸಾವನ್ನಪ್ಪಿದ ಆನೆ ಮರಿಗೆ 2 ವರ್ಷ 9 ತಿಂಗಳು ವಯಸ್ಸಾಗಿತ್ತು ಎನ್ನಲಾಗಿದೆ. ಈ ಆನೆ ಮರಿ ಇಲ್ಲಿಯ ಆನೆ ಶಿಬಿರದಲ್ಲೆ ಜನಿಸಿದ್ದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು. ಇದನ್ನು ಗೌರಿ ಎಂದು ಕರೆಯಲಾಗುತ್ತಿತ್ತು.
ಆನೆ ಮರಿಯ ಮುಖ, ಗಂಟಲು ಭಾಗದಲ್ಲಿ ಬಾವು ಕಾಣಿಸಿಕೊಂಡಿತೆನ್ನಲಾಗಿದೆ. ಸ್ಥಳೀಯರು ಆನೆ ಮರಿ ಆರೈಕೆಯಲ್ಲಿ ಉಂಟಾದ ಲೋಪ ದೋಷಗಳು, ಮಾವುತನ ನಿರ್ಲಕ್ಷತನ ಸಾವಿಗೆ ಕಾರಣವಾಯಿತೇ? ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕೆಲ ತಿಂಗಳ ಹಿಂದೆ ಅಂಬಿಕಾನಗರದಲ್ಲಿ ವಿದ್ಯುತ್ ತಂತಿ ತಗುಲಿ ಆನೆಯೊಂದು ಸಾವನ್ನಪ್ಪಿದ ಬೆನ್ನಲ್ಲೆ ಮತ್ತೊಂದು ಮರಿ ಆನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದು ಪ್ರಾಣಿಪ್ರಿಯರಿಗೆ ಆತಂಕವನ್ನುಂಟು ಮಾಡಿದೆ. ಹುಲಿ ರಕ್ಷಿತಾರಣ್ಯದಲ್ಲಿ ಆನೆಗಳ ಸಾವಿನ ಬಗ್ಗೆ ವನ್ಯಜೀವಿ ಇಲಾಖೆ ಎಚ್ಚರಿಕೆಯಿಂದಿರಬೇಕಿದೆ.