ಅಂಕೋಲಾ: ತೋಟದಲ್ಲಿ ಹೂವಿನ ಗಿಡಗಳನ್ನು ನೋಡಲು ನಡೆದುಕೊಂಡು ಹೋಗುತ್ತಿದ್ದ ವೇಳೆ ವಿಷಕಾರಿ ಹಾವು ಕಚ್ಚಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ ಅಂಕೋಲಾ ತಾಲೂಕಿನ ರಾಮನಗುಳಿಯ ಕಂಡ್ರಮನೆಯಲ್ಲಿ ನಡೆದಿದೆ.
ಮೃತರನ್ನು ಕಂಡ್ರಮನಯ ಗ್ರಾಮದ ಶೇಖರ ವೈದ್ಯ ಅವರ ಪತ್ನಿ ಯಶೋಧಾ ವೈದ್ಯ (39) ಎಂದು ಗುರುತಿಸಲಾಗಿದೆ. ಯಶೋಧಾ ಅವರು ತಮ್ಮ ಪತಿಯೊಂದಿಗೆ ಮನೆಯ ಸಮೀಪದ ತೋಟಕ್ಕೆ ತೆರಳಿದ್ದ ಸಂದರ್ಭ, ಅಚಾನಕ್ ಎಡಗಾಲಿನ ಪಾದದ ಮೇಲ್ಭಾಗದಲ್ಲಿ ವಿಷಜಂತು ಕಚ್ಚಿದೆ ಎನ್ನಲಾಗಿದೆ.
ಇದನ್ನೂ ಓದಿ: ಜಿಲ್ಲಾಧಿಕಾರಿ ಇ-ಮೇಲ್ ಖಾತೆಗೆ ಹುಸಿಬಾಂಬ್ ಬೆದರಿಕೆ
ಹಾವು ಕಚ್ಚಿದ ತಕ್ಷಣ ಕುಟುಂಬದವರು ಅವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಗುಳ್ಳಾಪುರಕ್ಕೆ ಕರೆದೊಯ್ದಿದ್ದಾರೆ. ಆದರೆ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ಮೂಲಕ ಯಲ್ಲಾಪುರ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಯಶೋಧಾ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿದೆ.
ಯಲ್ಲಾಪುರ ತಾಲೂಕು ಆಸ್ಪತ್ರೆಗೆ ತಲುಪಿದ ನಂತರ ವೈದ್ಯರು ಪರಿಶೀಲನೆ ನಡೆಸಿದಾಗ, ವೈದ್ಯರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಮೃತ ಯಶೋಧಾ ವೈದ್ಯರು ಪತಿ ಹಾಗೂ ಶಾಲೆಗೆ ತೆರಳುವ ವಯಸ್ಸಿನ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಈ ದುರ್ಘಟನೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಳೆಗಾಲ ಆರಂಭದ ಹಿನ್ನೆಲೆ ಗ್ರಾಮೀಣ ಪ್ರದೇಶಗಳಲ್ಲಿ ವಿಷಕಾರಿ ಹಾವುಗಳ ಸಂಚಾರ ಹೆಚ್ಚಾಗುತ್ತಿರುವುದರಿಂದ ಜನರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.























