ದಾಂಡೇಲಿ: ನಮ್ಮ ಭೂಮಿ, ನಮ್ಮ ಸಮುದ್ರ, ನಮ್ಮ ಬದುಕು – ಬಂದರು ಬೇಡ. ಪರಿಸರ ಸಂವೇದನಾಶೀಲ ಪ್ರದೇಶದಲ್ಲಿ ದೊಡ್ಡ ಮಟ್ಟದ ಯೋಜನೆಗಳು ಬೇಡ ಎನ್ನುವದು ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕರ ಧ್ವನಿ. ಹೋರಾಟ ಮುಂದುವರಿಯುವದು ನಿಶ್ಚಿತ. ಇದು ಹೋರಾಟಗಾರರ ಒಕ್ಕೊರಲ ಕೂಗು, ಯೋಜನೆಗೆ ಅನುಮತಿ ಸಿಕ್ಕರೆ ಸ್ಥಳೀಯರು, ಮೀನುಗಾರರು, ಪರಿಸರ ಹೋರಾಟಗಾರರು ಕಾನೂನು ಸಮರಕ್ಕೆ ಮುಂದಾಗಲಿದ್ದು ರಾಜ್ಯ ಉಚ್ಛ ನ್ಯಾಯಾಲಯ, ರಾಷ್ಟ್ರೀಯ ಹಸಿರು ಪ್ರಾಧಿಕಾರ ಪೀಠ, ಸುಪ್ರೀಂ ಕೋರ್ಟ್‌ನಲ್ಲಿ ದಾವೆ ದಾಖಲಿಸುವ ಹಾದಿ ಹಿಡಿಯಲಿದ್ದಾರೆ.
ಅಂಕೋಲಾ ತಾಲೂಕಿನ ಕೇಣಿಯಲ್ಲಿ JSW ಕಂಪನಿಯವರು ರೂಪಿಸಿರುವ ಗ್ರೀನ್ ಫೀಲ್ಡ್ ವಾಣಿಜ್ಯ ಬಂದರಿನ ಸಾರ್ವಜನಿಕ ಅಹವಾಲು ಸಭೆಯಲ್ಲಿ ಜಿಲ್ಲೆಯ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸಾರ್ವಜನಿಕರು 4000 ಕ್ಕೂ ಹೆಚ್ಚು ಅರ್ಜಿಗಳನ್ನು ಜಿಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಸಲ್ಲಿಸಿದ್ದಾರೆ. ಪರಿಸರ ವಿರೋಧಿ ನೀತಿಯಿಂದ ಕೂಡಿದ ಈ ಯೋಜನೆಯನ್ನು ಸ್ಥಳೀಯರು, ಮೀನುಗಾರರು, ಪರಿಸರವಾದಿಗಳು ಸಾರಸಗಟಾಗಿ ವಿರೋಧಿಸಿದ್ದು ಜೆ.ಎಸ್.ಡಬ್ಲೂ. ಕಂಪನಿಯ ಎಲ್ಲ ಪ್ರಯತ್ನಗಳು ಜನಾಕ್ರೋಶಕ್ಕೆ ತುತ್ತಾಗಿದೆ.
ಅನೇಕ ಲೋಪ ದೋಷಗಳನ್ನು ಎತ್ತಿ ಹಿಡಿದಿರುವ ಹೋರಾಟಗಾರರು ವಾಸ್ತವಕ್ಕೆ ಹತ್ತಿರವಾಗಿರುವ ನಿದರ್ಶನಗಳನ್ನು ಮುಂದಿಟ್ಟಿದ್ದು, ಇದು ಜನರ ಕೋಪಕ್ಕೆ ಇನ್ನಷ್ಟು ತೀವ್ರತೆ ನೀಡಿದೆ. ಸಾರ್ವಜನಿಕ ವಿಚಾರಣೆಯಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಜೆ.ಎಸ್.ಡಬ್ಲೂ. ಕಂಪನಿಯವರು E I A ವರದಿಯನ್ನು ತಿದ್ದುಪಡಿ ಮಾಡಿ ಮತ್ತೆ ಸಲ್ಲಿಸುವ ಸಾಧ್ಯತೆ ಇದೆಯನ್ನಲಾಗಿದೆ.
ಉದ್ಯೋಗ ಸೃಷ್ಠಿ, ಸ್ಥಳೀಯ ಅಭಿವೃದ್ಧಿ, ಮೂಲ ಸೌಕರ್ಯಗಳ ಭರವಸೆ ನೀಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೆಂಬಲ ಪಡೆಯಲು ಪ್ರಯತ್ನಿಸಬಹುದು. ಮುಂದಿನ ಹಂತದಲ್ಲಿ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ವರದಿ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಬಹುದೆಂದು ಉನ್ನತ ಮೂಲಗಳು ತಿಳಿಸಿವೆ.