ಕಾರವಾರ: ಗೋವಾ – ಕರ್ನಾಟಕ ಗಡಿಯ ಅನ್ಮೋಡ್ ಚೆಕ್‌ಪೋಸ್ಟ್ ಬಳಿ ಹೈ-ಸ್ಪೀಡ್ ಚೇಸಿಂಗ್ ಘಟನೆ ನಡೆದಿದೆ. ಥ್ರಿಲ್ಲಿಂಗ್ ಸಿನಿಮಾ ಸನ್ನಿವೇಶವನ್ನೇ ಹೋಲುತ್ತಿತ್ತು. ಪೊಲೀಸರ ಕಣ್ತಪ್ಪಿಸಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಇನ್ನೋವಾ ಕಾರು ಪೊಲೀಸರು ಅಡ್ಡಗಟ್ಟಿದ್ದರೂ ರಾಜ್ಯಗಳ ಗಡಿ ದಾಟಿ, ಮರಳಿ ತಿರುಗಿ, ಕೊನೆಗೆ ಚಾಲಕ ಕಾರು ಬಿಟ್ಟು ಕಾಡಿಗೆ ಪರಾರಿಯಾದ ರೋಚಕ ಘಟನೆ ನಡೆದಿದೆ.
ಅನ್ಮೋಡ್ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ, ಇನ್ನೋವಾ ಕಾರನ್ನು ನಿಲ್ಲಿಸಲು ಸೂಚಿಸಲಾಯಿತು. ಆದರೆ, ಚಾಲಕ ಪೊಲೀಸರ ಸೂಚನೆಯನ್ನು ನಿರ್ಲಕ್ಷಿಸಿ, ಅತಿವೇಗದಲ್ಲಿ ಗೋವಾ ದಿಕ್ಕಿಗೆ ಪರಾರಿಯಾದ. ತಕ್ಷಣವೇ ಕರ್ನಾಟಕ ಪೊಲೀಸರು ಗೋವಾ ಪೊಲೀಸರಿಗೆ ಮಾಹಿತಿ ರವಾನಿಸಿದರು.
ಗೋವಾದ ದಾರಬಾಂದೋಡಾ ಬಳಿ ಗೋವಾ ಪೊಲೀಸರು ವಾಹನ ತಡೆಗೆ ಯತ್ನಿಸುತ್ತಿದ್ದಂತೆ ಚಾಲಕ ಮತ್ತೊಂದು ಸಾಹಸ ಮಾಡಿ, ಕಾರನ್ನು ತಿರುಗಿಸಿ ಮತ್ತೆ ಕರ್ನಾಟಕದ ಕಡೆಗೆ ಬಂದಿದ್ದಾನೆ. ಈ ಸರಣಿ ಚೇಸಿಂಗ್ ಕೊನೆಗೆ ಅನ್ಮೋಡ್ ಬಳಿಯೇ ಅಂತ್ಯಗೊಂಡಿತು.
ರಾಮನಗರ ಪೊಲೀಸರು ಬಲೆ ಬೀಸಿದಾಗ, ಚಾಲಕ ಕ್ಷಣಾರ್ಧದಲ್ಲಿ ಓಡುತ್ತಿದ್ದ ಕಾರನ್ನು ಬಿಟ್ಟು, ಸಮೀಪದ ದಟ್ಟ ಕಾಡಿನೊಳಗೆ ಓಡಿ ಕಣ್ಮರೆಯಾಗಿದ್ದಾನೆ. ಪೊಲೀಸರು ತೀವ್ರ ಶೋಧ ನಡೆಸಿದರೂ ಚಾಲಕ ಪತ್ತೆಯಾಗಲಿಲ್ಲ. ವಶಪಡಿಸಿಕೊಂಡ ಕಾರಿನ ಪರಿಶೀಲನೆ ನಡೆಸಿದಾಗ, ಅದರೊಳಗೆ 1 ಟನ್‌ಗಿಂತಲೂ ಹೆಚ್ಚು ಅಕ್ರಮ ಗೋಮಾಂಸ ಪತ್ತೆಯಾಗಿದೆ. ಮಾಫಿಯಾ ಜಾಲದ ಕೃತ್ಯವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಚಾಲಕ ಮತ್ತು ವಾಹನದ ಮಾಲೀಕರಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.























