Home Advertisement
Home ನಮ್ಮ ಜಿಲ್ಲೆ ಉಡುಪಿ ಬಾವಿಯಲ್ಲಿ 3 ದಿನ ಸಿಲುಕಿದ ವೃದ್ಧ: ಜೀವ ಉಳಿಸಿದ ಗ್ಯಾಸ್ OTP

ಬಾವಿಯಲ್ಲಿ 3 ದಿನ ಸಿಲುಕಿದ ವೃದ್ಧ: ಜೀವ ಉಳಿಸಿದ ಗ್ಯಾಸ್ OTP

0
137

ಉಡುಪಿ: ಉಡುಪಿ ಜಿಲ್ಲೆಯ ಕೊಡವೂರು ಪ್ರದೇಶದಲ್ಲಿ 20 ಅಡಿ ಆಳದ ಬಾವಿಗೆ ಬಿದ್ದಿದ್ದ 60 ವರ್ಷದ ವೃದ್ಧ ವ್ಯಕ್ತಿಯೊಬ್ಬರು ಮೂರು ದಿನಗಳ ಸುದೀರ್ಘ ಹೋರಾಟದ ಬಳಿಕ ಪವಾಡಸದೃಶವಾಗಿ ಜೀವಂತವಾಗಿ ರಕ್ಷಿಸಲ್ಪಟ್ಟ ಘಟನೆ ನಡೆದಿದೆ.

ಶ್ರೀನಿವಾಸ ಭಟ್ (60) ಎಂಬವರು ಈ ಅವಘಡದಲ್ಲಿ ಸಿಲುಕಿದ ವ್ಯಕ್ತಿ. ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಇತ್ತೀಚೆಗೆ ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ತಮ್ಮ ತೋಟಕ್ಕೆ ನೀರು ಹಾಯಿಸಲು ತೆರಳಿದ್ದರು. ಈ ವೇಳೆ ಬಾವಿಯಲ್ಲಿ ಅಳವಡಿಸಿದ್ದ ಪಂಪ್‌ಗೆ ಕಸ ತುಂಬಿದ್ದರಿಂದ ಅದನ್ನು ಸ್ವಚ್ಛಗೊಳಿಸಲು ಹೋಗಿದ್ದರು.

ಪಂಪ್‌ಗೆ ಸಂಪರ್ಕಿಸಿದ ಪೈಪ್ ಅನ್ನು ಎಳೆಯುವಾಗ ಹಗ್ಗ ತುಂಡಾಗಿ, ಸಮತೋಲನ ಕಳೆದುಕೊಂಡ ಅವರು ಸುಮಾರು 20 ಅಡಿ ಆಳದ ಬಾವಿಗೆ ಬಿದ್ದಿದ್ದಾರೆ. ಸುತ್ತಮುತ್ತ ಯಾರೂ ಇಲ್ಲದ ಕಾರಣ ಅವರ ಕಿರುಚಾಟಕ್ಕೆ ಪ್ರತಿಕ್ರಿಯೆ ಸಿಗಲಿಲ್ಲ.

ಬಾವಿಯೊಳಗೆ ಇದ್ದ ಪೈಪ್ ಅನ್ನು ಹಿಡಿದುಕೊಂಡೇ ಶ್ರೀನಿವಾಸ ಭಟ್ ಅವರು ಮೂರು ದಿನಗಳ ಕಾಲ ಜೀವದ ಹೋರಾಟ ನಡೆಸಿದ್ದಾರೆ. ಆಹಾರ, ನೀರು ಇಲ್ಲದ ಪರಿಸ್ಥಿತಿಯಲ್ಲಿಯೂ ಅವರು ಧೈರ್ಯ ಕಳೆದುಕೊಳ್ಳದೇ ಜೀವ ಉಳಿಸಿಕೊಂಡಿದ್ದಾರೆ.

ಈ ನಡುವೆ, ಗ್ಯಾಸ್ ಸಿಲಿಂಡರ್ ವಿತರಿಸಲು ಬಂದ ಸಿಬ್ಬಂದಿ ಮನೆಗೆ ಆಗಮಿಸಿದ್ದರು. OTP ಪಡೆಯಲು ವ್ಯಕ್ತಿಯನ್ನು ಹುಡುಕಿದಾಗ, ಬಾವಿಯಿಂದ ಬರುತ್ತಿದ್ದ ಕಿರುಚಾಟ ಕೇಳಿಬಂದಿದೆ. ತಕ್ಷಣವೇ ಸ್ಥಳೀಯರ ಸಹಾಯದಿಂದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ.

ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ, ಹರಸಾಹಸ ಪಟ್ಟು ಶ್ರೀನಿವಾಸ ಭಟ್ ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.