ದೇಶದ ವಿದೇಶಗಳಲ್ಲಿಯೂ ಲಕ್ಷಾಂತರ ಭಕ್ತರು ಮತ್ತು ಅನುಯಾಯಿಗಳಿದ್ದು, ಇವರನ್ನು ಪ್ರೀತಿಯಿಂದ “ಡಾಕ್ಟರ್‌ಜೀ” ಎಂದು ಕರೆಯುತ್ತಿದ್ದರು.
ಉಡುಪಿ: ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟ್ರೋದ್ಧಾರದ ಕನಸನ್ನು ಕಾರ್ಯರೂಪಕ್ಕೆ ತರುವ ಮಹತ್ತರ ಧ್ಯೇಯದೊಂದಿಗೆ ಕಳೆದ ಸುಮಾರು ಐದು ದಶಕಗಳಿಂದ ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಸಾಲಿಗ್ರಾಮ ಡಿವೈನ್ ಪಾರ್ಕ್ ಸಂಸ್ಥಾಪಕ, ಖ್ಯಾತ ವೈದ್ಯ ಹಾಗೂ ಆಧ್ಯಾತ್ಮಿಕ ಚಿಂತಕ ಎ. ಚಂದ್ರಶೇಖರ್ ಉಡುಪ (75) ಅವರು ಹೃದಯಾಘಾತದಿಂದ ಜ.7ರ ಬೆಳಗಿನ ಜಾವ ದೈವಾಧೀನರಾಗಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿದ್ದ ಎ. ಚಂದ್ರಶೇಖರ್ ಉಡುಪ ಅವರು, ಎಪ್ಪತ್ತರ ದಶಕದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲೇ ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಆಳವಾಗಿ ಪ್ರಭಾವಿತರಾಗಿದ್ದರು. ಇದೇ ಪ್ರೇರಣೆಯಿಂದ ಆರೋಗ್ಯ, ಅಧ್ಯಾತ್ಮ ಮತ್ತು ಮಾನವೀಯ ಮೌಲ್ಯಗಳ ಸಮನ್ವಯದ ಮೂಲಕ ಸಮಾಜ ಹಾಗೂ ರಾಷ್ಟ್ರಕ್ಕೆ ಒಳಿತು ಮಾಡುವ ಸಂಕಲ್ಪದೊಂದಿಗೆ “ಡಿವೈನ್ ಪಾರ್ಕ್” ಸಂಸ್ಥೆಯನ್ನು ಸ್ಥಾಪಿಸಿದರು.
ಡಿವೈನ್ ಪಾರ್ಕ್ ಮೂಲಕ ಯೋಗ, ಪ್ರಕೃತಿ ಚಿಕಿತ್ಸೆ, ಆಯುರ್ವೇದ ಹಾಗೂ ಆಧ್ಯಾತ್ಮಿಕ ಚಿಕಿತ್ಸಾ ಕ್ರಮಗಳನ್ನು ಸಮಾಜದ ವಿವಿಧ ವರ್ಗಗಳಿಗೆ ತಲುಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆರೋಗ್ಯ ಕೇವಲ ದೇಹಕ್ಕೆ ಸೀಮಿತವಲ್ಲ, ಅದು ಮನಸ್ಸು ಮತ್ತು ಆತ್ಮದ ಸಮತೋಲನದಲ್ಲಿದೆ ಎಂಬ ನಂಬಿಕೆಯನ್ನು ಕಾರ್ಯರೂಪಕ್ಕೆ ತಂದವರು ಡಾ. ಚಂದ್ರಶೇಖರ್ ಉಡುಪ.
ಇದನ್ನೂ ಓದಿ: KPS ಶಿಕ್ಷಣಕ್ಕೆ ಸಂಜೀವಿನಿಯೋ? ಹಳ್ಳಿ ಶಾಲೆಗೆ ಮರಣಶಾಸನವೋ?
ಇವರ ಮಾರ್ಗದರ್ಶನದಲ್ಲಿ ಡಿವೈನ್ ಪಾರ್ಕ್‌ನ ಸಹಸಂಸ್ಥೆಯಾಗಿ ಎಸ್‌ಎಚ್‌ಆರ್‌ಎಫ್ (ಯೋಗಬನ) ಸ್ಥಾಪನೆಯಾಗಿ, ಯೋಗ ಮತ್ತು ಸಮಗ್ರ ಆರೋಗ್ಯದ ಕುರಿತು ಜನಜಾಗೃತಿ ಮೂಡಿಸುವ ಕಾರ್ಯ ನಡೆಯಿತು. ದೇಶದ ವಿವಿಧ ಭಾಗಗಳಲ್ಲದೇ ವಿದೇಶಗಳಲ್ಲಿಯೂ ಇವರ ಸಾವಿರಾರು ಭಕ್ತರು ಮತ್ತು ಅನುಯಾಯಿಗಳಿದ್ದು, ಎಲ್ಲರೂ ಅವರನ್ನು ಪ್ರೀತಿಯಿಂದ “ಡಾಕ್ಟರ್‌ಜೀ” ಎಂದು ಕರೆಯುತ್ತಿದ್ದರು.
ಅವರು ತಮ್ಮ ಜೀವನವನ್ನು ಸಂಪೂರ್ಣವಾಗಿ ಸಮಾಜಸೇವೆಗೆ ಅರ್ಪಿಸಿಕೊಂಡಿದ್ದು, ವೈಯಕ್ತಿಕ ಲಾಭಕ್ಕಿಂತ ಮಾನವ ಕಲ್ಯಾಣವನ್ನೇ ಮೊದಲ ಆದ್ಯತೆಯಾಗಿ ಕಂಡವರು. ಅವರ ಮಾರ್ಗದರ್ಶನದಲ್ಲಿ ಅನೇಕರು ಆರೋಗ್ಯ, ಜೀವನಶೈಲಿ ಹಾಗೂ ಆಧ್ಯಾತ್ಮಿಕ ಬದುಕಿನಲ್ಲಿ ಹೊಸ ದಿಕ್ಕು ಕಂಡಿದ್ದಾರೆ.
ಮೃತರು ಪುತ್ರ ಡಾ. ವಿವೇಕ ಉಡುಪ, ಸೊಸೆ, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇಂದು ಬೆಳಗ್ಗೆ 10.30ರಿಂದ ಸಂಜೆ 4 ಗಂಟೆಯವರೆಗೆ ಡಿವೈನ್ ಪಾರ್ಕ್‌ನ ಜ್ಞಾನ ಮಂದಿರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬಳಿಕ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ ಎಂದು ಡಿವೈನ್ ಪಾರ್ಕ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಮಾಜಕ್ಕೆ ಆರೋಗ್ಯ, ಮೌಲ್ಯ ಮತ್ತು ಅಧ್ಯಾತ್ಮದ ದೀಪ ಬೆಳಗಿಸಿದ ಮಹಾನ್ ವ್ಯಕ್ತಿತ್ವದ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ.









