ಉಡುಪಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗುರುವಾರ ವಿಚಾರಣೆಗೆಂದು ಬ್ರಹ್ಮಾವರ ಠಾಣೆಗೆ ಕರೆತರುತ್ತಿದ್ದ ವೇಳೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಇಲಾಖಾ ವಾಹನಕ್ಕೆ ಕಾರು ಡಿಕ್ಕಿ ಹೊಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕಾರ್ಕಳ ಗ್ರಾಮಾಂತರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ತಿಮರೋಡಿ ಬೆಂಬಲಿಗರಾದ ಉಜಿರೆಯ ಸೃಜನ್ ಎಲ್., ಹಿತೇಶ್ ಶೆಟ್ಟಿ ಮತ್ತು ಸಹನ್ ಬಂಧಿತರು. ವಿಚಾರಣೆಗೆಂದು ಉಜಿರೆಯ ತಿಮರೋಡಿಯ ಮಹೇಶ್ ಶೆಟ್ಟಿ ಮನೆಯಿಂದ ಬ್ರಹ್ಮಾವರ ಠಾಣೆಗೆ ಕರೆತರುವ ವೇಳೆ ಪೊಲೀಸ್ ವಾಹನಗಳನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ತಿಮರೋಡಿ ಬೆಂಬಲಿಗರು, ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದಾಗ ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ ಎಂದು ಅನೇಕ ಬಾರಿ ಸೂಚನೆ ನೀಡಿದರೂ ಪಾಲಿಸದೇ ಹೊಸ್ಮಾರು ಬಳಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಇಲಾಖಾ ವಾಹನ ನಂಬರ್ ಕೆಎ-20 ಜಿ-0669 ವಾಹನಕ್ಕೆ ಡಿಕ್ಕಿ ಹೊಡೆದು ಆರೋಪಿ ಮಹೇಶ ಶೆಟ್ಟಿಯನ್ನು ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗದಂತೆ ಅಡ್ಡಿಪಡಿಸಿದರು.
ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಲಯದೆದುರು ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ್ದ (ಕೆಎ-70 ಎಂ-3048) ಬಿಳಿ ಬಣ್ಣದ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆಯಲಾಗಿದೆ.