ಉಡುಪಿ: ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ನಡೆದ ಲೋಕಾಯುಕ್ತ ದಾಳಿಯ ಭಾಗವಾಗಿ ಉಡುಪಿ ಜಿಲ್ಲಾ ಅಬಕಾರಿ ಡಿಸಿ ಶ್ರೀನಿವಾಸ್ ಟಿ.ಎಂ.ಗೆ ಸಂಬಂಧಿಸಿದ ಸ್ಥಳಗಳ ಮೇಲೆಯೂ ಮಹತ್ವದ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಸುಮಾರು 8.69 ಕೋಟಿ ರೂ. ಮೌಲ್ಯದ ಅಸಮತೋಲನ ಆಸ್ತಿ ಪತ್ತೆಯಾಗಿದೆ.
ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ದಿನೇಶ್ ಕುಮಾರ್ ನೇತೃತ್ವದಲ್ಲಿ ಮಾ. 11ರಿಂದ ಎರಡು ದಿನಗಳ ಕಾಲ ಈ ಶೋಧ ಕಾರ್ಯಾಚರಣೆ ನಡೆಯಿತು. ಈ ಅಧಿಕಾರಿಗೆ ಸಂಬಂಧಿಸಿದಂತೆ ಒಟ್ಟು 15 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು.
ದಾಳಿ ವೇಳೆ ಅಬಕಾರಿ ಡಿಸಿ ಶ್ರೀನಿವಾಸ್‌ಗೆ ಸಂಬಂಧಿಸಿದ 11 ನಿವೇಶನಗಳು, 6 ವಾಸದ ಮನೆಗಳು ಹಾಗೂ 31 ಎಕರೆ ಕೃಷಿ ಜಮೀನು ಸೇರಿದಂತೆ ಒಟ್ಟು ರೂ. 6 ಕೋಟಿ 90 ಲಕ್ಷದ 64 ಸಾವಿರದ 716 ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿವೆ.
ಜೊತೆಗೆ ವಿವಿಧ ರೂಪದಲ್ಲಿ ಭಾರಿ ಪ್ರಮಾಣದ ಚರಾಸ್ತಿಯೂ ಪತ್ತೆಯಾಗಿದೆ. 3,95,941 ರೂ. ನಗದು, 1 ಕೋಟಿ 47 ಲಕ್ಷದ 50 ಸಾವಿರದ 506 ರೂ. ಮೌಲ್ಯದ ಚಿನ್ನಾಭರಣ, 17 ಲಕ್ಷ ರೂ. ಮೌಲ್ಯದ ವಾಹನಗಳು, 25 ಲಕ್ಷ 75 ಸಾವಿರ ರೂ. ಬ್ಯಾಂಕ್ ಠೇವಣಿ ಪತ್ರಗಳು, 72 ಲಕ್ಷ 68 ಸಾವಿರದ 554 ರೂ. ಮೌಲ್ಯದ ಇತರ ವಸ್ತುಗಳು ಸೇರಿದಂತೆ 2 ಕೋಟಿ 66 ಲಕ್ಷದ 90 ಸಾವಿರದ 1 ರೂ. ಮೌಲ್ಯದ ಚರಾಸ್ತಿ ಪತ್ತೆಯಾಗಿದೆ.
ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ಒಟ್ಟು ರೂ. 8 ಕೋಟಿ 69 ಲಕ್ಷ 54 ಸಾವಿರದ 717 ಮೌಲ್ಯದ ಆಸ್ತಿ ಪತ್ತೆಯಾಗಿದೆ. ಈ ಎಲ್ಲಾ ಆಸ್ತಿಗಳ ಮೂಲದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.























