ಬೆಳಗಾವಿ: ಶಾಲಾ-ಕಾಲೇಜಿಗೆ ತೆರಳಲು ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿರುವ ವಿದ್ಯಾರ್ಥಿಗಳು ಬಸ್ ಸೌಲಭ್ಯ ಕಲ್ಪಿಸಲು ಆಗ್ರಹಿಸಿ, ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿಯ ಸುವರ್ಣವಿಧಾನಸೌಧ ಬಳಿ ನಡೆದಿದೆ.
ಬೆಳಗಾವಿ ತಾಲೂಕಿನ ಕೊಂಡಸಕಪ್ಪ ಗ್ರಾಮದ ವಿದ್ಯಾರ್ಥಿಗಳು ಬುಧವಾರ ಸುವರ್ಣವಿಧಾನಸೌಧ ಬಳಿ ದಿಢೀರ್ ಪ್ರತಿಭಟನೆ ನಡೆಸಿ, ತಮ್ಮ ಊರಿಗೆ ಸರಿಯಾದ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸೂಕ್ತ ಸಮಯದಲ್ಲಿ ಬಸ್ ಸಿಗದೆ ಅನಾನುಕೂಲವಾಗಿತ್ತು. ಆದ್ದರಿಂದ ಇದರಿಂದ ಬೇಸತ್ತ ಪೋಷಕರು ಈ ಹಿಂದೆ ವಿದ್ಯಾರ್ಥಿಗಳೊಂದಿಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಆದರೂ ಸಹ ಸಮಸ್ಯೆ ಬಗೆಹರಿಯದ ಹಿನ್ನಲೆಯಲ್ಲಿ ಬುಧವಾರ ಗ್ರಾಮಸ್ಥರು, ವಿದ್ಯಾರ್ಥಿಗಳು ಬೆಳಗಾವಿಯ ಸುವರ್ಣವಿಧಾನಸೌಧ ಮುಂದೆ ಏಕಾಏಕಿ ರಸ್ತೆ ತಡೆ ಮಾಡಿ ತಮ್ಮೂರಿಗೆ ಬಸ್ ಬಿಡುವಂತೆ ಒತ್ತಾಯಿಸಿದರು. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.
ದಿಢೀರ್ ಪ್ರತಿಭಟನೆಯಿಂದಾಗಿ ಹೆದ್ದಾರಿಯೂದ್ದಕ್ಕೂ ವಾಹನಗಳು ಗಂಟೆಗಟ್ಟಲೇ ನಿಲ್ಲಬೇಕಾಯಿತು. ಗ್ರಾಮಕ್ಕೆ ಬಸ್ ಬಿಡುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಎಂದು ವಿದ್ಯಾರ್ಥಿಗಳು, ಪೋಷಕರು ರಸ್ತೆ ತಡೆ ನಡೆಸಿ, ಘೋಷಣೆಗಳನ್ನು ಕೂಗಿದರು.
ಸ್ಥಳಕ್ಕೆ ಆಗಮಿಸಿದ ಹಿರೇಬಾಗೇವಾಡಿ ಪೊಲೀಸರು ಗ್ರಾಮಸ್ಥರು, ವಿದ್ಯಾರ್ಥಿಗಳ ಮನವೊಲಿಸಿ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಪ್ರತಿಭಟನೆಯನ್ನು ಕೈ ಬಿಡುವಂತೆ ಮನವಿ ಮಾಡಿದರು. ಬಳಿಕ ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭವಾಯಿತು. ಆ ವೇಳೆಗಾಗಲೇ ಸುಮಾರು 1 ಕಿ. ಮೀ. ಟ್ರಾಫಿಕ್ ಜಾಮ್ ಉಂಟಾಗಿತ್ತು.