ಶಿವಮೊಗ್ಗ: ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಹೂತು ಹಾಕಿರುವುದಾಗಿ ಹೇಳಿ ಎಸ್‌ಐಟಿ ತನಿಖೆ ನಡೆಯುವಂತೆ ಮಾಡಿ, ಈಗ ತಾನೇ ವಿಚಾರಣೆ ಎದುರಿಸುತ್ತಿರುವ ಮಾಸ್ಕ್ ಮ್ಯಾನ್ ಅಲಿಯಾಸ್ ಚಿನ್ನಯ್ಯನನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಕರೆತರಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ನ್ಯಾಯಾಲಯದ ಆದೇಶದ ಮೇರೆಗೆ ಶನಿವಾರ ತಡ ರಾತ್ರಿ 1:30 ರ ಸುಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಚಿನ್ನಯ್ಯನನ್ನು ಶಿವಮೊಗ್ಗದ ಹೊರ ವಲಯದ ಸೋಗಾನೆಯ ಕೇಂದ್ರ ಕಾರಾಗೃಹಕ್ಕೆ ತಂದು ಬಿಟ್ಟಿದ್ದಾರೆ.
16 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಕೋರ್ಟ್‌ನಲ್ಲಿ ಮನವಿ ಮಾಡಿದ್ದರು.
ಕೋರ್ಟ್ 14 ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಿದೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಚಿನ್ನಯ್ಯನನ್ನು ಭದ್ರತೆಯ ದೃಷ್ಟಿಯಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ತಂದು ಬಿಟ್ಟಿದ್ದಾರೆ. ಮುಂದಿನ 14 ದಿನಗಳ ನಂತರ ಚಿನ್ನಯ್ಯನನ್ನು ಮತ್ತೆ ಬೆಳ್ತಂಗಡಿ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ.
ಶಿವಮೊಗ್ಗದ ಜೈಲಿನ ಭದ್ರತೆಯನ್ನು ನೋಡಿಕೊಳ್ಳುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಗಳು ತಪಾಸಣೆ ನಡೆಸಿ, ಜೈಲಿನಲ್ಲಿ ಇಬ್ಬರು ಇರುವ ಸೆಲ್‌ನಲ್ಲಿ ಚಿನ್ನಯ್ಯನನ್ನು ಇಡಲಾಗಿದೆ. ಆತನನ್ನು ಸಹ ಇತರೆ ಸಜಾ ಬಂಧಿಗಳಂತೆ ನೋಡಿಕೊಳ್ಳಲಾಗುವುದು ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ. ರಂಗನಾಥ್ ತಿಳಿಸಿದ್ದಾರೆ. ಶಿವಮೊಗ್ಗ ಕಾರಾಗೃಹದಲ್ಲಿರುವ ಚಿನ್ನಯ್ಯಗೆ ಕೈದಿ ನಂ. 1104 ನೀಡಲಾಗಿದೆ.