ಶಿವಮೊಗ್ಗ: ಒಬ್ಬ ಪತಿಯಾಗಿ ನನ್ನ ಪತ್ನಿ ಗೀತಾ ಅವರು ಶಾಸಕಿ, ಸಂಸದೆಯಾಗಿ ಆಯ್ಕೆಯಾಗಲಿ ಎಂಬ ಆಸೆ ನನಗೂ ಇದೆ ಎಂದು ನಟ ಶಿವರಾಜ್ ಕುಮಾರ್ ತಮ್ಮ ಆಶಯವನ್ನು ಹಾಕಿದರು.
ಶನಿವಾರ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪನವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಸುದ್ದಿಗಾರರ ಜೊತೆ ಮಾತನಾಡಿ, ಗೀತಾ ಶಿವರಾಜಕುಮಾರ್ ಈಗಾಗಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಸಕ ಅಥವಾ ಸಂಸದೆಯಾಗಿ ಆಯ್ಕೆಯಾದರೆ ಮಹಿಳೆಯರಿಗೊಂದು ಸ್ಫೂರ್ತಿ ದೊರೆಯಲಿದೆ. ಇದಕ್ಕಾಗಿ ಜನಪ್ರತಿನಿಧಿ ಆಗಬೇಕು ಎಂಬ ಆಶಯ ಇದೆ ಎಂದರು.
ಗೀತಾ ಶಿವರಾಜಕುಮಾರ್ ಅವರನ್ನು ಒಬ್ಬ ಸೆಲೆಬ್ರಿಟಿ ಆಗಿ ನೋಡುವ ಅಗತ್ಯ ಇಲ್ಲ. ಸಮಾಜ ಸೇವೆಯಲ್ಲಿ ಎಲ್ಲರ ಜೊತೆಗೆ ಬೆರೆಯುತ್ತಿದ್ದಾರೆ. ರಾಜಕೀಯ ಕುಟುಂಬದಿಂದ ಆಕೆ ಬಂದಿರುವುದರಿಂದ ಸಹಜವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಶಯ ಹೊಂದಿದ್ದಾರೆ ಎಂದರು.
ಪಕ್ಷದ ಹೈಕಮಾಂಡ್ ಅವಕಾಶ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ. ಇಲ್ಲವಾದರೆ ಬೇಸರವಿಲ್ಲ. ನಾವು ಯಾವುದಕ್ಕೂ ಸಿದ್ಧರಿದ್ದೇವೆ. ಚುನಾವಣೆಯಲ್ಲಿ ಸ್ಪರ್ಧಿಸಿದರೆ ನನ್ನ ಬೆಂಬಲ ಇರುತ್ತದೆ. ಪ್ರಚಾರಕ್ಕೂ ನಾನು
ಬರುತ್ತೇನೆ. ನಾನು ಸಿನಿಮಾರಂಗದಲ್ಲಿರುವುದರಿಂದ ರಾಜಕೀಯಕ್ಕೆ ಬರುವ ಯಾವ ಉದ್ದೇಶವನ್ನು ಹೊಂದಿಲ್ಲ. ಅದರ ಬಗ್ಗೆ ನನಗೆ ಆಸಕ್ತಿಯೂ ಇಲ್ಲ. ಜನರ ಸೇವೆ ಮಾಡೋಕೆ ರಾಜಕೀಯದಲ್ಲಿದ್ದುಕೊಂಡು ಸೇವೆ ಮಾಡೋದು ಗೊತ್ತಿಲ್ಲ. ಜನ ಕಷ್ಟ ಅಂತ ಬಂದರೆ ಹಣ ಕೊಟ್ಟು ಕಳುಹಿಸುವೆ ಎಂದರು.


























