ರಾಮನಗರ ನಗರಸಭೆ ವ್ಯಾಪ್ತಿಗೆ ಇನ್ನಷ್ಟು ಗ್ರಾಮ ಪಂಚಾಯಿತಿ ಸೇರ್ಪಡೆ

0
43

“ರಾಮನಗರ ನಗರಸಭೆಯನ್ನು ಗ್ರೇಡ್ –1 ಆಗಿ ಪರಿವರ್ತನೆ ಮಾಡುವ ಸಂಬಂಧ ಮಾಯಗಾನಹಳ್ಳಿ ಹಾಗೂ ಬಿಳಗುಂಬ ಗ್ರಾಮ ಪಂಚಾಯಿತಿಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗುತ್ತದೆ” ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.

ಗುರುವಾರ ನಗರಸಭೆ ಆವರಣದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ರಾಮನಗರ ನಗರಸಭೆಯನ್ನು ಗ್ರೇಡ್ -1ವನ್ನಾಗಿ ಪರಿವರ್ತನೆ ಮಾಡುವ ಸಂಬಂಧ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ಕೆಲವು ಪ್ರದೇಶವನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಕೆಲಸ ಮಾಡಲಾಗಿತ್ತು” ಎಂದರು.

“ಇದರ ಮುಂದುವರೆದ ಭಾಗವಾಗಿ ಬಿಳಗುಂಬ ಹಾಗೂ ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿಯನ್ನು ಸೇರಿಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಈ ಸಂಬಂಧ ಈಗಾಗಲೇ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೃಷಿ, ಕೃಷಿಯೇತರ ಚುಟುವಟಿಕೆಗಳು ಜನಸಂಖ್ಯೆ ಸೇರಿದಂತೆ ಎಲ್ಲವನ್ನು ಸರ್ವೇ ಮಾಡಲಾಗುತ್ತಿದೆ. ಜೊತೆಗೆ ಗ್ರೇಡ್ -1 ನಗರಸಭೆಯನ್ನಾಗಿಸಲು ಸರ್ಕಾರವೂ ಸಮ್ಮತಿಸಿದೆ” ಎಂದು ಹೇಳಿದರು.

ಮೂರು ದಿನದಲ್ಲಿ ಮುಟ್ಟುಗೋಲು: ರಾಮನಗರ ನಗರಸಭೆ ವತಿಯಿಂದ ಎಂ.ಜಿ.ರಸ್ತೆಯಲ್ಲಿ ನಿರ್ಮಿಸಲಾಗಿರುವ ಮಳಿಗೆಯಲ್ಲಿ ಕಳೆದ ಹಲವು ಸಾಲಿನಿಂದ ಬಾಡಿಗೆ ಇರುವ ಪರವಾನಗಿದಾರರು ಈ ತನಕ ಬಾಡಿಗೆ ಪಾವತಿಸಿಲ್ಲ. ಹಾಗಾಗಿ ಅವರ ಮುಂಗಡ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಸಭೆಯಲ್ಲಿ ಮಾನವೀಯತೆಯ ಆಧಾರದ ಮೇಲೆ ಮಳಿಗೆಮಾಲೀಕರಿಗೆ ಕಾಲಾವಕಾಶ ನೀಡಬೇಕು. ಏಕಾಏಕಿ ಮುಂಗಡ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬಾರದು ಎಂದು ಮನವಿ ಸಲ್ಲಿಕೆ ಮಾಡಲಾಯಿತು.

ಕೆ.ಶೇಷಾದ್ರಿ ಮಾತನಾಡಿ, “ಹರಾಜು ಪ್ರಕ್ರಿಯೆಯಲ್ಲಿ ಬಾಡಿಗೆ ತೆಗೆದುಕೊಂಡ ಬಳಿಕ ಈ ತನಕ ಯಾರು ಸಹ ಬಾಡಿಗೆ ಪಾವತಿಸಿಲ್ಲ. ಮಾನವೀತೆಯ ಆಧಾರದ ಮೇಲೆ ಕಾಲಾವಕಾಶ ನೀಡಲಾಗಿತ್ತು. ಇದಕ್ಕೆ ಯಾರು ಸ್ಪಂದಿಸಲಿಲ್ಲ.ಹಾಗಾಗಿ ಮುಂಗಡ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಯಿತು. ಇನ್ನು ಮೂರು ದಿನ ಸಮಯ ಅವಕಾಶ ನೀಡಲಾಗುತ್ತದೆ. ಆಗಲು ಬಾಡಿಗೆ ಪಾವತಿ ಮಾಡದಿದ್ದರೆ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ” ಎಂದರು.

ನೀರಿನ ಸಮಸ್ಯೆ: ನಗರಸಭೆ ವ್ಯಾಪ್ತಿಯ ಕೆಲವು ಬಡಾವಣೆಯಲ್ಲಿ ನೀರಿನ ಸಮಸ್ಯೆ ಸಾಕಷ್ಟಿದೆ. ಸಮಸ್ಯೆ ಬಗೆಹರಿಸಿಕೊಡಬೇಕೆಂದು ನಗರಸಭೆ ಸದಸ್ಯರು ಆಗ್ರಹಿಸಿದರು. ಈ ವೇಳೆ ಮಾಜಿ ಉಪಾಧ್ಯಕ್ಷ ಸೋಮಶೇಖರ್ (ಮಣಿ) ಮಾತನಾಡಿ, ಅಧ್ಯಕ್ಷರು ಪ್ರತಿನಿಧಿಸುತ್ತಿರುವ ವಾರ್ಡ್ 5ರಲ್ಲಿ ನೀರಿನ ಸಮಸ್ಯೆ ಇದೆ. 25ರಿಂದ 30 ಮನೆಗೆ 24ಗಂಟೆ ಯೋಜನೆಯ ನೀರಿನ ಸಂಪರ್ಕ ನೀಡಿಲ್ಲ. ಇದರಿಂದಾಗಿ ಸಾಕಷ್ಟು ತೊಂದರೆಯಾಗುತ್ತಿದೆ. ಜೊತೆಗೆ 8ನೇ ವಾರ್ಡಿನ ಅಗ್ರಹಾರದ ಮುಖ್ಯ ರಸ್ತೆ ಸಾಕಷ್ಟು ಹದಗೆಟ್ಟಿದ್ದು ತೊಂದರೆಯಾಗುತ್ತಿದೆ ಎಂದರು. ನಗರಸಭೆ ಸದಸ್ಯರಿಗೆ ಮಾಸಿಕವಾಗಿ ನೀಡಲಾಗುತ್ತಿದ್ದ 2 ಸಾವಿರ ಹಣವನ್ನು 5ಸಾವಿರಕ್ಕೆ ಏರಿಕೆ ಮಾಡುವ ಪ್ರಸ್ತಾಪಕ್ಕೆ ನಗರಸಭೆ ಸದಸ್ಯರು ಧ್ವನಿಗೂಡಿ ಒಕ್ಕೂರಲಿನಿಂದ ಸ್ವಾಗತಿಸಿದರು.

ಕೆಂಗಲ್ ಪ್ರಶಸ್ತಿ: ನವೆಂಬರ್ ತಿಂಗಳಲ್ಲಿನಲ್ಲಿ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ. ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ನವೆಂಬರ್ 1ರಂದು ಎಲ್ಲರೂ ರಾಜ್ಯೋತ್ಸವ ಆಚರಣೆ ಮಾಡಲಿದ್ದಾರೆ. ಹಾಗಾಗಿ ಆ ತಿಂಗಳಲ್ಲಿ ದಿನಾಂಕ ನಿಗದಿ ಮಾಡಿ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದು ಚರ್ಚೆ ನಡೆಸಲಾಯಿತು.

ಜೆಡಿಎಸ್ ಸದಸ್ಯ ಮಂಜುನಾಥ್ ಮಾತನಾಡಿ, “ತಾಲ್ಲೂಕು ಕಚೇರಿ ಹಾಗೂ ಉಪವಿಭಾಗಾಧಿಕಾರಿ ಕಚೇರಿಗೆ ನೀರುಪೂರೈಕೆ ಮಾಡುವ ಪೈಪ್ ಲೈನ್ ಕಾಮಗಾರಿಯನ್ನು ನಿಲ್ಲಿಸಲಾಗಿದ್ದು, ಶೀಘ್ರವಾಗಿ ಮರುಚಾಲನೆ ಮಾಡಬೇಕೆಂದು” ಆಗ್ರಹಿಸಿದರು.

Previous articleಬಿಡದಿ ಟೌನ್ ಶಿಪ್ ಭೂ ಸ್ವಾಧೀನ: ಅಧಿಕಾರಿಗಳ ಕಾರು ಅಡ್ಡಗಟ್ಟಿದ ರೈತರು
Next articleಋತುಚಕ್ರ ರಜೆ: ಸಮಾನತೆಯೆಡೆಗೆ ಸರ್ಕಾರದ ದಿಟ್ಟ ಹೆಜ್ಜೆ

LEAVE A REPLY

Please enter your comment!
Please enter your name here