ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಅಂಚೇಸುಗೂರು ಬಳಿ ಸಂಭವಿಸಿದ ಭಯಾನಕ ಬಸ್ ಅಪಘಾತದಲ್ಲಿ ಸಾರಿಗೆ ನಿಗಮದ ಬಸ್ ಪಲ್ಟಿಯಾಗಿ ಕಂಡಕ್ಟರ್ ಬಸವರಾಜ್ (36) ಮೃತಪಟ್ಟಿದ್ದು, 23ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದರಲ್ಲಿ ಇಬ್ಬರಿಗೆ ಕೈ ಮುರಿದಿದೆ. ಬಸ್‌ನಲ್ಲಿ ಸುಮಾರು 35 ಜನರಿದ್ದರು. ಬಸ್ ಪಟ್ಟಿ ಮುರಿದ ಪರಿಣಾಮ ಬಸ್ ಪಲ್ಟಿಯಾಗಿದೆ ಎಂಬುವುದು ತಿಳಿದುಬಂದಿದೆ.
ಅಂಜಳ ಗ್ರಾಮದಿಂದ ದೇವದುರ್ಗಕ್ಕೆ ವಾಪಸ್ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಅಂಚೇಸುಗೂರು ಕಾಲುವೆ ಸೇತುವೆ ದಾಟುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಗಾಯಗೊಂಡ ಕಂಡಕ್ಟರ್ ಬಸವರಾಜ್‌ರನ್ನು ರಾಯಚೂರು ರಿಮ್ಸ್‌ಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ದುರ್ಮರಣ ಹೊಂದಿದರು.
ರೈತರೇ ರಕ್ಷಣೆ ಕಾರ್ಯಕ್ಕೆ ಮುಂದಾದರು: ಘಟನೆ ಬಳಿಕ ಸಹಾಯಕ್ಕಾಗಿ ಆಂಬ್ಯುಲೆನ್ಸ್ ಬರುವಷ್ಟರಲ್ಲಿ, ಸ್ಥಳೀಯ ರೈತರು ತಕ್ಷಣ ಧಾವಿಸಿ, ಬಸ್‌ನ ಕಿಟಕಿಗಳ ಗಾಜು ಮುರಿದು ಗಾಯಾಳುಗಳನ್ನು ಹೊರತೆಗೆದಿದ್ದಾರೆ. ಗಾಯಗೊಂಡವರನ್ನು ಟಂಟಂ, ಬೈಕ್ ಹಾಗೂ ಇತರೆ ವಾಹನಗಳಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂಬುದೂ ವರದಿಯಾಗಿದೆ.
ಚಾಲಕನಿಗೆ ಗಂಭೀರ ಗಾಯ: ಅಪಘಾತದಲ್ಲಿ ಬಸ್ ಚಾಲಕನೂ ಗಾಯಗೊಂಡಿದ್ದು, ಅವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಗಾಯಾಳುಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣ ದಾಖಲು: ಘಟನೆ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಪಲ್ಟಿಯಾದ ನಿಖರ ಕಾರಣಕ್ಕಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.























